
ಉದಯವಾಹಿನಿ, ಉದಯಪುರ : ರಾಬಿ ಋತುಮಾನದ ಸಮಯದಲ್ಲಿ ರಾಜ್ಯದ ಹಲವು ಭಾಗದಲ್ಲಿ ರೈತರು ಯೂರಿಯಾ ರಸಗೊಬ್ಬರ ಸಮಸ್ಯೆ ಎದುರಿಸುತ್ತಿದ್ದಾರೆ. ರಸಗೊಬ್ಬರ ಕೊರತೆಯಿಂದಾಗಿ ಬೆಳೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಜೊತೆಗೆ ಇಳುವರಿ ಕೂಡ ಕಡಿಮೆಯಾಗುವ ಆತಂಕ ಎದುರಾಗಿದೆ. ಹಲವು ಜಿಲ್ಲೆಗಳಲ್ಲಿ ಮುಂಜಾನೆಯಿಂದಲೇ ರಸಗೊಬ್ಬರ ಅಂಗಡಿಗಳಲ್ಲಿ ರೈತರ ದೊಡ್ಡ ದೊಡ್ಡ ಸಾಲುಗಳನ್ನು ಕಾಣಬಹುದಾಗಿದ್ದು, ರೈತರು ನಿಗದಿತ ಪ್ರಮಾಣದ ರಸಗೊಬ್ಬರವನ್ನು ಪಡೆಯಲು ವಿಫಲರಾಗಿದ್ದಾರೆ.
ವಿನೂತನ ಪ್ರತಿಭಟನೆ: ರಸಗೊಬ್ಬರ ಸಮಸ್ಯೆಯಿಂದ ಬೇಸತ್ತಿರುವ ಗ್ರಾಮಸ್ಥರು ಉದಯಪುರದ ಕೃಷಿ ಇಲಾಖೆ ಕಚೇರಿಯಲ್ಲಿ ವಿನೂತನ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದರು. ಮೇವರ್ ಕಿಸನ್ ಸಂಘರ್ಷ್ ಸಮಿತಿಯ ಬ್ಯಾನರ್ ಅಡಿ ರೈತರು ಪ್ರತಿಭಟನೆ ನಡೆಸಿದ್ದು, ಕತ್ತೆಗೆ ಹೂವು ಹಾಕಿ ಅದಕ್ಕೆ ಗುಲಾಬ್ ಜಾಮೂನ್ ತಿನ್ನಿಸಿ ಸರ್ಕಾರದ ನೀತಿ ವಿರುದ್ಧ ಹರಿಹಾಯ್ದರು. ಯೂರಿಯಾ ಗೊಬ್ಬರದ ಚೀಲದ ಚಿತ್ರವನ್ನು ಸಹ ಬಿಡಿಸಿ, ಅದರ ಮೇಲೆ ಹೂವುಗಳನ್ನು ಇರಿಸಿ, ಗೊಬ್ಬರವು ಸತ್ತು ಹೋಯಿತು ಎಂಬಂತೆ ಗೌರವ ಸಲ್ಲಿಸಿದರು.
ಕಾಳಸಂತೆ ಆರೋಪ: ರೈತ ಮುಖಂಡ ಮದನ್‌ಲಾಲ್ ಡಾಂಗಿ ಮಾತನಾಡಿ, ಯೂರಿಯಾ ಕೊರತೆಯು ಬೆಳೆಗಳಿಗೆ ನೇರವಾಗಿ ಹಾನಿ ಮಾಡುತ್ತಿದೆ. ಸಮಯಕ್ಕೆ ಸರಿಯಾಗಿ ರಸಗೊಬ್ಬರ ಸಿಗದಿರುವುದರಿಂದ ಉತ್ಪಾದನೆ ಕುಂಠಿತವಾಗುವ ಅಪಾಯ ಎದುರಾಗಿದೆ. ಇದರಿಂದಾಗಿ ರೈತರಿಗೆ ಹೆಚ್ಚನ ಆರ್ಥಿಕ ನಷ್ಟ ಉಂಟಾಗಲಿದೆ. ಅನೇಕ ಪ್ರದೇಶಗಳಲ್ಲಿ ಯೂರಿಯಾ ಕಾಳಸಂತೆಯಲ್ಲಿ ವ್ಯಾಪಕವಾಗಿ ದುಬಾರಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಆದರೆ, ಆಡಳಿತವು ಪರಿಣಾಮಕಾರಿ ಕ್ರಮ ತೆಗೆದುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಯೂರಿಯಾವನ್ನು ನಿಯಮಿತವಾಗಿ ಮತ್ತು ಸಾಕಷ್ಟು ಪ್ರಮಾಣದಲ್ಲಿ ಸರಬರಾಜು ಮಾಡದಿದ್ದರೆ, ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ರೈತ ಮುಖಂಡರು ಎಚ್ಚರಿಸಿದರು. ಹವಾಮಾನ ವೈಪರೀತ್ಯ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳ ಹೊರೆಯನ್ನು ರೈತರು ಈಗಾಗಲೇ ಎದುರಿಸುತ್ತಿದ್ದಾರೆ. ರಸಗೊಬ್ಬರ ಬಿಕ್ಕಟ್ಟು ಅವರ ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸಿದೆ. ಸರ್ಕಾರವು ವಾಸ್ತವ ಅರ್ಥಮಾಡಿಕೊಳ್ಳಬೇಕು. ತಕ್ಷಣಕ್ಕೆ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
