
ಉದಯವಾಹಿನಿ, ಸೋಮನಾಥ. ಈ ಪದ ಕೇಳಿದಾಗ ನಮ್ಮ ಮನಸ್ಸಿನಲ್ಲಿ ಹೆಮ್ಮೆಯ ಭಾವ ಮೂಡುತ್ತದೆ. ಇದು ಭಾರತದ ಆತ್ಮದ ಶಾಶ್ವತ ಸ್ಥಳ. ಪಶ್ಚಿಮ ಕರಾವಳಿಯಲ್ಲಿರುವ ಗುಜರಾತ್ನ ಪ್ರಭಾತ್ ಪಠಾಣ್ ಎಂಬಲ್ಲಿ ಭವ್ಯ ದೇಗುಲವಿದೆ. ಭಾರತದೆಲ್ಲೆಡೆ 12 ಜ್ಯೋತಿರ್ಲಿಂಗಗಳ ಸ್ತ್ರೋತ್ರದ ಉಲ್ಲೇಖ ಕಾಣಬಹುದು. ಈ ಸ್ತ್ರೋತ್ರ “ಸೌರಾಷ್ಟ್ರೇ ಸೋಮನಾಥಂ ಚ..”ಶ್ಲೋಕದೊಂದಿಗೆ ಶುರುವಾಗುತ್ತದೆ. ಇದು ಮೊದಲ ಜ್ಯೋತಿರ್ಲಿಂಗವಾಗಿರುವ ಸೋಮನಾಥದ ಆಧ್ಯಾತ್ಮಿಕ ಮಹತ್ವವನ್ನು ಸಂಕೇತಿಸುತ್ತದೆ. ಸೋಮಲಿಂಗಂ ನರೋ ದೃಷ್ಟ್ವಾ ಸರ್ವಪಾಪೈಃ ಪ್ರಮುಚ್ಯತೇ।, ಲಭತೇ ಫಲಂ ಮನಃಕೃತಂ ಸ್ವರ್ಗಂ ಸಮಾಶ್ರಯೇತ್॥ ಎಂದೂ ಕೂಡ ಈ ಸ್ತ್ರೋತ್ರ ತಿಳಿಸುತ್ತದೆ. ಸೋಮನಾಥ ಶಿವಲಿಂಗವನ್ನು ನೋಡುವುದರಿಂದಲೇ ವ್ಯಕ್ತಿ ಪಾಪಗಳಿಂದ ಮುಕ್ತನಾಗುತ್ತಾನೆ. ಆತ ನೀತಿವಂತ ಆಸೆಗಳನ್ನು ಸಾಧಿಸಿ, ಮರಣಾನಂತರ ಸ್ವರ್ಗ ಪಡೆಯುತ್ತಾನೆ ಎಂಬುದು ಇದರರ್ಥ.ದುರಂತವೆಂದರೆ, ಲಕ್ಷಾಂತರ ಜನರ ಶ್ರದ್ಧಾ, ಭಕ್ತಿ ಮತ್ತು ಪ್ರಾರ್ಥನೆಗಳ ನಡುವೆ ಸೋಮನಾಥ ದೇಗುಲವನ್ನು ಗುರಿಯಾಗಿಸಿಕೊಂಡು ವಿದೇಶಿ ಆಕ್ರಮಣಕಾರರು ಹಲವು ಬಾರಿ ದಾಳಿ ಮಾಡಿದರು.
ಈ ವರ್ಷ, 2026 ಸೋಮನಾಥ ದೇಗುಲಕ್ಕೆ ಮಹತ್ವದ್ದು. ಏಕೆಂದರೆ ದೇಗುಲದ ಮೇಲೆ ದಾಳಿ ನಡೆದು 1,000 ವರ್ಷಗಳು ಕಳೆಯುತ್ತಿವೆ. 1026ರ ಜನವರಿಯಲ್ಲಿ ಮೊಹಮ್ಮದ್ ಘಜ್ನಿ ಈ ದೇವಾಲಯದ ಮೇಲೆ ದಾಳಿ ಮಾಡಿದ್ದ. ಅತ್ಯಂತ ಹಿಂಸಾತ್ಮಕ ಮತ್ತು ಅನಾಗರಿಕ ಆಕ್ರಮಣದ ಮೂಲಕ ನಂಬಿಕೆ ಮತ್ತು ನಾಗರಿಕತೆಯ ಮಹಾನ್ ಸಂಕೇತವಾಗಿರುವ ದೇಗುಲವನ್ನು ನಾಶಮಾಡಲು ಆತ ಪ್ರಯತ್ನಿಸಿದ್ದ.
ಇದಾಗಿ ಸಾವಿರ ವರ್ಷಗಳ ಬಳಿಕವೂ ದೇಗುಲದ ಭವ್ಯತೆಯನ್ನು ಕಾಪಾಡಲು ನಡೆದ ಹಲವು ಪ್ರಯತ್ನಗಳಿಂದಾಗಿ ಅದೇ ಭವ್ಯತೆಯಿಂದ ದೇಗುಲ ಇಂದು ತಲೆ ಎತ್ತಿ ನಿಂತಿದೆ. ಈ ರೀತಿಯ ಒಂದು ಮೈಲಿಗಲ್ಲು 2026ರಲ್ಲಿ ಪೂರ್ಣಗೊಂಡು 75 ವರ್ಷವಾಗುತ್ತಿದೆ. 1951ರ ಮೇ 11ರಂದು ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಪುನಃಸ್ಥಾಪಿಸಿದ ದೇಗುಲ ಭಕ್ತರಿಗೆ ಮುಕ್ತವಾಗಿತ್ತು.
