ಉದಯವಾಹಿನಿ , ಚೆನ್ನೈ : ಕರೂರ್ ಕಾಲ್ತುಳಿತ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ನಟ-ರಾಜಕಾರಣಿ ಮತ್ತು ತಮಿಳಗ ವೆಟ್ರಿ ಕಳಗಂ ಸಂಸ್ಥಾಪಕ ವಿಜಯ್(Vijay) ಅವರಿಗೆ ಕೇಂದ್ರೀಯ ತನಿಖಾ ದಳ (ಸಿಬಿಐ) ಸಮನ್ಸ್ ಜಾರಿ ಮಾಡಿದೆ. ಸೆಪ್ಟೆಂಬರ್ 27ರಂದು ಕರೂರಿನಲ್ಲಿ ಟಿವಿಕೆ ಮುಖ್ಯಸ್ಥ, ಖ್ಯಾತ ನಟ ವಿಜಯ್ ಅವರು ಭಾಗವಹಿಸಿದ್ದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಮಂದಿ ಮೃತಪಟ್ಟಿದ್ದರು. ಮತ್ತು 60 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
ಪ್ರಕರಣದ ಎಸ್‌ಐಟಿ ತನಿಖೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದ ಟಿವಿಕೆ, ಸ್ವತಂತ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿತ್ತು. ಎಸ್‌ಐಟಿಯಲ್ಲಿ ತಮಿಳುನಾಡಿನ ಪೊಲೀಸರು ಮಾತ್ರ ಇರುವುದರಿಂದ ನಿಷ್ಪಕ್ಷಪಾತ ತನಿಖೆ ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ ಈ ಘಟನೆ ರಾಜಕೀಯ ಕೋಲಾಹಲಕ್ಕೆ ಕಾರಣವಾದ ಬಳಿಕ ತಮಿಳುನಾಡು ಪೊಲೀಸರು ಕೈಗೆತ್ತಿಕೊಂಡಿದ್ದ ತನಿಖೆಯನ್ನು ಸುಪ್ರೀಂ ಕೋರ್ಟ್ ಸಿಬಿಐಗೆ ಹಸ್ತಾಂತರಿಸಿತ್ತು. ಸಿಬಿಐ ತನಿಖೆಯ ಮೇಲ್ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಅಜಯ್ ರಸ್ತೋಗಿ ನೇತೃತ್ವದ ಸಮಿತಿಯನ್ನೂ ರಚಿಸಿತ್ತು.
ʼಜನ ನಾಯಗನ್ʼ ಸಿಮಾದಲ್ಲಿ ವಿಜಯ್ ಬ್ಯೂಸಿ
ಚಿತ್ರರಂಗ ತೊರೆಯುತ್ತಿರುವುದಾಗಿ ಈಗಾಗಲೇ ವಿಜಯ್ ಘೋಷಿಸಿದ್ದು, ಸದ್ಯ ಅವರ ಕೊನೆಯ ಸಿನಿಮಾ ʼಜನ ನಾಯಗನ್ʼ ತೆರೆಗೆ ಬರಲು ಸಜ್ಜಾಗಿದೆ. ಜನವರಿ 9ರಂದು ಈ ಸಿನಿಮಾ ಬಿಡುಗಡೆಯಾಗಲಿದ್ದು, ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಅಭಿಮಾನಿಗಳು ಈ ಚಿತ್ರವನ್ನು ಕಣ್ತುಂಬಿಕೊಳ್ಳಲು ಸಜ್ಜಾಗಿದ್ದು, ಮೂಲಕ ತಮ್ಮ ನೆಚ್ಚಿನ ನಾಯಕನ ಕೊನೆ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ಗೆಲ್ಲಿಸಲು ಮುಂದಾಗಿದ್ದಾರೆ. ಎಚ್. ವಿನೋತ್ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿಯಾಗಿ ಕನ್ನಡತಿ ಪೂಜಾ ಹೆಗ್ಡೆ ನಟಿಸಿದ್ದಾರೆ.
