ಉದಯವಾಹಿನಿ , ಮುಂಬೈ, : ಕಳೆದ ವರ್ಷ ಇಳಿಕೆ ಕಂಡಿದ್ದ ರೈಲ್ವೆ ಷೇರುಗಳು ಇತ್ತೀಚಿನ ಪ್ರಯಾಣ ದರ ಏರಿಕೆ ಮತ್ತು ಕೇಂದ್ರ ಬಜೆಟ್ 2026 ಸಮೀಪಿಸುತ್ತಿದ್ದಂತೆ ಹೂಡಿಕೆದಾರರ ಗಮನ ಸೆಳೆಯುತ್ತಿವೆ. ಕ್ಯಾಪಿಟಲೈನ್‌ನ ಅಂಕಿಅಂಶಗಳ ಪ್ರಕಾರ, ಕಳೆದ ಎರಡು ವಾರಗಳು ಅಥವಾ 10 ವಹಿವಾಟು ದಿನಗಳಲ್ಲಿ ರೈಲ್ವೆ ಷೇರುಗಳು ಶೇ. 13ರಷ್ಟು ಏರಿಕೆಯಾಗಿವೆ.
ಇರ್ಕಾನ್ ಇಂಟರ್‌ನ್ಯಾಷನಲ್ ಷೇರುಗಳು ಶೇಕಡಾ 14ರಷ್ಟು ಏರಿಕೆ ಕಂಡಿದ್ದು, ರೈಲ್ ವಿಕಾಸ್ ನಿಗಮ್ ಶೇ. 10ರಷ್ಟು ಹೆಚ್ಚಾಗಿದೆ. ಐಆರ್‌ಎಫ್‌ಸಿ (IRFC), ಟಿಟಾಗಢ್ ರೈಲ್ ಸಿಸ್ಟಮ್ಸ್ ಮತ್ತು ಜ್ಯುಪಿಟರ್ ವ್ಯಾಗನ್ಸ್ ತಲಾ ಸುಮಾರು ಶೇ. 9ರಷ್ಟು ಏರಿಕೆ ಕಂಡಿವೆ. ಇತ್ತ ಐಆರ್‌ಸಿಟಿಸಿ ಶೇ. 2ರಷ್ಟು ಲಾಭ ನೀಡಿದೆ.
ಡಿಸೆಂಬರ್ 26ರಿಂದ ಜಾರಿಗೆ ಬರುವ ಪ್ರಯಾಣಿಕರ ದರ ಏರಿಕೆಯು 600 ಕೋಟಿ ರುಪಾಯಿ ಆದಾಯವನ್ನು ಹೆಚ್ಚಿಸಿದ್ದು, 2026ರ ಕೇಂದ್ರ ಬಜೆಟ್‌ಗೆ ಮುಂಚಿನ ದಾಖಲೆಯ 1.3 ಟ್ರಿಲಿಯನ್ ರುಪಾಯಿ ಮೂಲಧನ ವೆಚ್ಚ (ಕ್ಯಾಪೆಕ್ಸ್) ಘೋಷಣೆಯ ನಿರೀಕ್ಷೆ ಇರುವುದು ರೈಲ್ವೆ ಷೇರುಗಳಿಗೆ ಪ್ರಮುಖ ಚಾಲಕಶಕ್ತಿಗಳಾಗಿವೆ ಎಂದು ವೆಂಚುರಾ ಸಂಸ್ಥೆಯ ಸಂಶೋಧನಾ ವಿಭಾಗದ ಮುಖ್ಯಸ್ಥ ವಿನಿತ್ ಬೋಲಿಂಜ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಆರ್‌ವಿಎನ್‌ಎಲ್ ಮತ್ತು ಐಆರ್‌ಎಫ್‌ಸಿ ನಂತಹ ಸಾರ್ವಜನಿಕ ವಲಯದ ಸಂಸ್ಥೆಗಳು ಸುಧಾರಿತ ಕಾರ್ಯಾಚರಣಾ ಅನುಪಾತಗಳು ಹಾಗೂ ಕವಚ್ (Kavach) ಮುಂತಾದ ಸುರಕ್ಷತಾ ಮೂಲಸೌಕರ್ಯಗಳ ಮೇಲಿನ ಗಮನದಿಂದ ಲಾಭ ಗಳಿಸಿವೆ. ರೈಲ್ವೆಗೆ ಬಜೆಟ್ ಅನುದಾನಗಳನ್ನು ಅಂದಾಜು ಮಾಡುತ್ತ 2026ರಲ್ಲಿ ಸರ್ಕಾರವು ಸುರಕ್ಷತಾ ವೆಚ್ಚವನ್ನು ದ್ವಿಗುಣಗೊಳಿಸಬಹುದು ಹಾಗೂ ಚಟುವಟಿಕೆಗೆ ವೇಗ ನೀಡಲು 1.3 ಲಕ್ಷ ಕೋಟಿ ರುಪಾಯಿ ಅನುದಾನವನ್ನು ಮೀಸಲಿಡುವ ಸಾಧ್ಯತೆ ಇದೆ ಎಂದು ಬೋಲಿಂಜ್ಕರ್ ಹೇಳಿದ್ದಾರೆ.
