ಉದಯವಾಹಿನಿ , ಗ್ವಾಲಿಯರ್: ಮುಖ ಸಂಪೂರ್ಣ ನಜ್ಜುಗುಜ್ಜಾಗಿ ಗುರುತೇ ಪತ್ತೆ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದ ಶವ ಯಾರದ್ದು ಎನ್ನುವ ಕುರಿತು ಸಂಪೂರ್ಣ ಮಾಹಿತಿ ಲಭ್ಯವಾಗಿ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದ್ದ ಯಾವುದೇ ಕುರುಹುಗಳಿಲ್ಲದ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ್ದು ಮೂರು ಪ್ರಮುಖ ಅಂಶಗಳು. ಅವುಗಳೆಂದರೆ ಆಮ್ಲೆಟ್ ತುಂಡು , ಕೃತಕ ಬುದ್ಧಿಮತ್ತೆ ಮತ್ತು ಯುಪಿಐ ಪಾವತಿ ವಿವರಗಳು. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಕೊಲೆಯ ರಹಸ್ಯವನ್ನು ಭೇದಿಸಿದ್ದಾರೆ.
ಮಧ್ಯಪ್ರದೇಶದ ಗ್ವಾಲಿಯರ್‌ನ ಗೋಲಾ ಕಾ ಮಂದಿರ ಪೊಲೀಸ್ ಠಾಣೆ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಡಿಸೆಂಬರ್ 29ರಂದು ಮಹಿಳೆಯ ಶವವೊಂದು ಪತ್ತೆಯಾಗಿತ್ತು. ಆಕೆಯ ಮುಖವನ್ನು ಭಾರವಾದ ಕಲ್ಲಿನಿಂದ ಜಜ್ಜಲಾಗಿತ್ತು. ಈ ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ಸಹಾಯ ಮಾಡಿದ್ದು ಆಮ್ಲೆಟ್ ತುಂಡು, ಕೃತಕ ಬುದ್ಧಿಮತ್ತೆ ಮತ್ತು ಯುಪಿಐ ಪಾವತಿ ವಿವರಗಳು. ಶವದ ಮುಖ ಭಾಗ ಬಹುತೇಕ ನಾಶವಾಗಿದ್ದರಿಂದ ಪೊಲೀಸರು ಆಕೆಯನ್ನು ಗುರುತಿಸುವಲ್ಲಿ ವಿಫಲರಾದರು. ಬಳಿಕ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಆಕೆಯ ರೇಖಾಚಿತ್ರವನ್ನು ತಯಾರಿಸಲಾಯಿತು ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಧರ್ಮವೀರ್ ಸಿಂಗ್ ತಿಳಿಸಿದ್ದಾರೆ.
ಈ ಪ್ರಕರಣವನ್ನು ಭೇದಿಸಲು ಆಮ್ಲೆಟ್ ತುಂಡು ಮತ್ತು ಆನ್‌ಲೈನ್ ಪಾವತಿಯ ವಿವರಗಳು ಸಹಾಯ ಮಾಡಿತ್ತು. ಇದರಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಯಾವುದೇ ಕುರುಹುಗಳಿಲ್ಲದ ಈ ಪ್ರಕರಣದಲ್ಲಿ ಮಹಿಳೆಯನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಆರಂಭದಲ್ಲಿ, ಶವವನ್ನು ಪರಿಶೀಲಿಸಿದಾಗ ಆಮ್ಲೆಟ್ ತುಂಡು ಕಂಡುಬಂದಿದೆ. ಇದರ ಆಧಾರದಲ್ಲಿ 200 ಮೀಟರ್ ವ್ಯಾಪ್ತಿಯೊಳಗಿನ ಆಹಾರ ಮಳಿಗೆಗಳನ್ನು ಪ್ರಶ್ನಿಸಲಾಗಿದ್ದು, ಒಬ್ಬ ಮಹಿಳೆ ಇಬ್ಬರು ಪುರುಷರೊಂದಿಗೆ ಆಮ್ಲೆಟ್ ತಿಂದಿರುವ ಮಾಹಿತಿ ಸಿಕ್ಕಿದೆ ಎಂದು ಅವರು ವಿವರಿಸಿದರು.
