ಉದಯವಾಹಿನಿ , ಚಳಿಗಾಲ ಬಂತೆಂದರೆ ಸಾಕು. ಹಲವು ರೀತಿಯ ಆರೋಗ್ಯ ಸಮಸ್ಯೆ ಕಾಡಲು ಆರಂಭವಾಗುತ್ತವೆ. ಹಾಗಾಗಿ ನಮ್ಮ ದೇಹದ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ನಾವು ಕೆಲವೊಂದು ಆಹಾರಗಳನ್ನು ಸೇವನೆ ಮಾಡಬೇಕಾಗಿ ಬರುತ್ತದೆ. ಅದರಲ್ಲೂಈ ಸಮಯದಲ್ಲಿ ನಾವು ಆಯ್ಕೆ ಮಾಡಿಕೊಳ್ಳುವ ಪ್ರಮುಖ ಆಹಾರ ಅಂದ್ರೆ ಅರಿಶಿನ, ನೆಲ್ಲಿಕಾಯಿ, ಶುಂಠಿ ಮತ್ತು ಹಸಿರು ಸೊಪ್ಪುಗಳ ಬಳಕೆ ಹೆಚ್ಚಾಗಿರುತ್ತದೆ. ಇವುಗಳಲ್ಲಿ ರೋಗನಿರೋಧಕ, ಶಕ್ತಿಯನ್ನು ಹೆಚ್ಚಿಸುವ ಅದ್ಭುತ ಗುಣಗಳಿದ್ದು ಕೇವಲ ಇವುಗಳನ್ನು ಸೇವಿಸಿದರೆ ಸಾಲದು. ಅವುಗಳನ್ನು ಸರಿಯಾಗಿ ಬಳಸುವ ಕ್ರಮ ಕೂಡ ತಿಳಿದಿರಬೇಕು. ನಮ್ಮ ದೇಹವು ಇವುಗಳಲ್ಲಿರುವ ಪೋಷಕಾಂಶಗಳನ್ನು ಸರಿಯಾಗಿ ಹೀರಿಕೊಳ್ಳಬೇಕಾದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಸೇವನೆ ಮಾಡುವುದು ಕೂಡ ಮುಖ್ಯವಾಗಿರುತ್ತದೆ.
ಅರಿಶಿನದಲ್ಲಿರುವ ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಕಡಿಮೆ ನೈಸರ್ಗಿಕ ಜೈವಿಕ ಲಭ್ಯತೆ ಯನ್ನು ಹೊಂದಿದೆ. ಹಾಗಾಗಿ ತಜ್ಞರ ಪ್ರಕಾರ, ಅರಿಶಿನದ ಜೊತೆಗೆ ಒಂದು ಚಿಟಿಕೆ ಕಾಳುಮೆಣಸು ಆ್ಯಡ್ ಮಾಡಿ ಸೇವಿಸಿದರೆ ಅದರಲ್ಲಿರುವ ‘ಪೈಪರಿನ್’ ಅಂಶವು ಅರಿಶಿನದ ಹೀರಿಕೊಳ್ಳುವಿಕೆಯನ್ನು ನೂರರಷ್ಟು ಹೆಚ್ಚಿಸುತ್ತದೆ..ಅದರ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಪ್ರಯೋಜನಗಳನ್ನು ಕೂಡ ದೇಹದಲ್ಲಿ ಹೆಚ್ಚಿಸುತ್ತದೆ.
ತುಪ್ಪ, ಆಲಿವ್ ಎಣ್ಣೆ ಅಥವಾ ತೆಂಗಿನ ಎಣ್ಣೆಯಂತಹ ಆರೋಗ್ಯಕರ ಕೊಬ್ಬಿನೊಂದಿಗೆ ಅರಿಶಿನವನ್ನು ಸೇರಿಸುವುದರಿಂದ ಅದು ಕರುಳಿನ ಒಳಪದರದ ಮೂಲಕ ರಕ್ತಪ್ರವಾಹಕ್ಕೆ ಹೆಚ್ಚು ಪರಿಣಾಮಕಾರಿಯಾಗಿ ಹಾದುಹೋಗಲು ಸಹಾಯ ಮಾಡುತ್ತದೆ. ಹಾಗಾಗಿ ನೀವು ಸೇವಿಸುವ ಹಾಲು ಅಥವಾ ಅಡುಗೆಗೆ ಅರಿಶಿನ ಹಾಕುವಾಗ ಸ್ವಲ್ಪ ತುಪ್ಪ ಸೇರಿಸುವುದನ್ನು ಮರೆಯದಿರಿ.
