ಉದಯವಾಹಿನಿ , ಪ್ರಸ್ತುತ ನಡೆಯುತ್ತಿರುವ 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಹಲವು ದೇಶಿ ಪ್ರತಿಭೆಗಳು ಬೆಳಕಿಗೆ ಬಂದಿದ್ದಾರೆ. ಅದರಂತೆ ಜನವರಿ 6 ರಂದು ಬಂಗಾಳ ಮತ್ತು ಹೈದರಾಬಾದ್ ಪಂದ್ಯದಲ್ಲಿಯೂ ಒಬ್ಬ ದೇಶಿ ಪ್ರತಿಭೆ ಬೆಳಕಿಗೆ ಬಂದಿದ್ದಾರೆ. ಹೈದರಾಬಾದ್ ತಂಡದ ಬ್ಯಾಟ್ಸ್‌ಮನ್ ಅಮನ್ ರಾವ್ (Aman Rao), ಈ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಎಲ್ಲರ ಗಮನವನ್ನು ಸೆಳೆದಿದ್ದಾರೆ. ಆ ಮೂಲಕ ತನ್ನನ್ನು 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಖರೀದಿಸಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭರವಸೆ ಮೂಡಿಸಿದ್ದಾರೆ.
ರಾಜಕೋಟ್‌ನ ನಿರಂಜನ್ ಶಾ ಸ್ಟೇಡಿಯಂನಲ್ಲಿ ಮಂಗಳವಾರ ನಡೆಸಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಹೈದರಾಬಾದ್ ತಂಡದ ಪರ ಇನಿಂಗ್ಸ್ ಆರಂಭಿಸಿದ್ದ ಅಮನ್ ರಾವ್, ಅದ್ಭುತ ಆಟವನ್ನು ಪ್ರದರ್ಶಿಸಿದರು. 21ನೇ ವಯಸ್ಸಿನ ಬ್ಯಾಟ್ಸ್‌ಮನ್ ಅಮನ್ ರಾವ್ ಈ ಪಂದ್ಯದಲ್ಲಿ ಕೊನೆಯ ಒಂದು ಎಸೆತ ಬಾಕಿ ಇರುವಾಗ 194 ರನ್ ಗಳಿಸಿದ್ದರು ಹಾಗೂ ದ್ವಿಶತಕ ಪೂರೈಸಲು 6 ರನ್ ಅಗತ್ಯವಿತ್ತು. ಈ ವೇಳೆ ಕೊನೆಯ ಎಸೆತದಲ್ಲಿ ಅವರು ಸಿಕ್ಸರ್ ಬಾರಿಸಿದ್ದರು ಹಾಗೂ ತಮ್ಮ ಚೊಚ್ಚಲ ದ್ವಿಶತಕವನ್ನು ಬಾರಿಸಿದರು. ಇವರ ದ್ವಿಶತಕದ ಬಲದಿಂದ ಹೈದರಾಬಾದ್ ತಂಡ ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 352 ರನ್‌ಗಳನ್ನು ಕಲೆ ಹಾಕಿತ್ತು.
