ಉದಯವಾಹಿನಿ, ಬೆಂಗಳೂರು: ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಮಾಡಿ ಯುವತಿಗೆ ಮೆಸೇಜ್ ಕಳುಹಿಸಿ ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಆಗಿದೆ. ಇದು ಕಾಂಗ್ರೆಸ್ ಐಟಿ ಟೀಂನ ಕೆಲಸ ಎಂದು ಬಿಜೆಪಿ ಶಾಸಕ ಸಿ.ಕೆ ರಾಮಮೂರ್ತಿ ಕಾಂಗ್ರೆಸ್ ವಿರುದ್ಧ ಆರೋಪ ಹೊರಿಸಿದ್ದಾರೆ.
ಫೇಸ್‌ಬುಕ್, ಇನ್ಸ್ಟಾದಲ್ಲಿ ಯುವತಿಗೆ ಮೆಸೇಜ್ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೀಲ್ಸ್ ಚೆನ್ನಾಗಿದೆ ಎಂದು ಹಾಸನದ ಮಹಿಳೆಗೆ ಸಂದೇಶ ಹೋಗಿದೆ. ಸಂದೇಶ ಕಳುಹಿಸಿ ತಕ್ಷಣ ಕಾಂಗ್ರೆಸ್ ಐಟಿ ಟೀಂ ವೈರಲ್ ಮಾಡಿದೆ. ಇದು ಹೇಗೆ ಸಾಧ್ಯ? ನಿರಂತರವಾಗಿ ಸೈಬರ್ ಫ್ರಾಡ್ ಮಾಡಲಾಗುತ್ತಿದೆ. ನನ್ನ ಹೆಸರಿನಲ್ಲಿ ಅನೇಕ ಫೇಕ್ ಅಕೌಂಟ್‌ಗಳನ್ನು ಕೂಡ ಓಪನ್ ಮಾಡಲಾಗಿದೆ. ಎರಡು ಸಲ ಹ್ಯಾಕ್ ಆಗಿದೆ. ಕಳೆದ ಬಾರಿ ದುಡ್ಡು ಕೊಡಿ ಅಂತಾ ಸಂದೇಶಗಳು ಬಂದಿತ್ತು. ಈಗ ಇನ್ಸ್ಟಾದಲ್ಲಿ ಸಂದೇಶ ಕಳುಹಿಸಲಾಗಿದೆ. ಆದರೆ ನನ್ನ ಮೊಬೈಲ್‌ನಲ್ಲಿ ಸಂದೇಶ ಇಲ್ಲ. ಫೇಕ್ ಅಕೌಂಟ್‌ಗಳು ಕ್ರಿಯೆಟ್ ಆಗಿದೆ. ನಾನು ಚುನಾವಣೆ ಗೆದ್ದ ಬಳಿಕ ಈ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ದೂರಿದ್ದಾರೆ.
ನನ್ನ ಹೆಸರಿಗೆ ಮಸಿ ಬಳಿದವರ ವಿರುದ್ಧ ನಾನು ಮಾನನಷ್ಟ ಮೊಕದ್ದಮೆ ಹೂಡುವೆ. ಯೂತ್ ಕಾಂಗ್ರೆಸ್ ಟೀಂನವರು ನನ್ನ ಹೆಸರಿಗೆ ಮಸಿ ಬಳಿಯುವ ಕೆಲಸ ಮಾಡುತ್ತಿದ್ದರು. ಇದು ಕಾಂಗ್ರೆಸ್‌ನವರೇ ಮಾಡಿರೋದು. ಜಯನಗರ ಕಾಂಗ್ರೆಸ್ ಟೀಂನವರು ಇದನ್ನ ವೈರಲ್ ಮಾಡಿದ್ದಾರೆ. ನಾಳೆ ಕಾಂಗ್ರೆಸ್ ಐಟಿ ಟೀಂ ವಿರುದ್ಧ ಮಾನನಷ್ಟ ಮೊಕದ್ದಮೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇನೆ ಎಂದು ಸ್ಪಷ್ಟನೆ ನೀಡಿದರು.
