ಉದಯವಾಹಿನಿ, ಬೆಂಗಳೂರು: ಕೌರವರು ದ್ರೌಪದಿ ವಸ್ತ್ರಾಪಹರಣ ಮಾಡಿದ ಹಾಗೆ ಕೌರವ ವಂಶಸ್ಥರಾದ ಸಿದ್ದರಾಮಯ್ಯ ಸರ್ಕಾರದಲ್ಲಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಮೇಲೆ ದೌರ್ಜನ್ಯ ನಡೆದಿದೆ ಎಂದು ವಿಧಾನಸಭೆ ವಿಪಕ್ಷ ಉಪ ನಾಯಕ ಅರವಿಂದ್ ಬೆಲ್ಲದ್ ಸಿಎಂ, ಡಿಸಿಎಂ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹುಬ್ಬಳ್ಳಿ ಘಟನೆ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿದ್ದರಾಮಯ್ಯ ಸರ್ಕಾರದಲ್ಲಿ ಮಹಿಳೆಯರು ಮೇಲೆ ಹೀಗೆ ಆದ ಘಟನೆ ನಾಗರಿಕ ಸಮಾಜ ಬೆಚ್ಚಿ ಬೀಳುವ ಪ್ರಕರಣ. ಒಬ್ಬ ಮಹಿಳೆಯನ್ನ ಪೊಲೀಸರು ಸರ್ಕಾರದ ಅಣತಿ ಮೇಲೆ ನಗ್ನ ಮಾಡಿದ್ದಾರೆ. ಇದು ಭಯಾನಕ ಘಟನೆ. ಪೊಲೀಸರೇ ಬಲಾತ್ಕಾರ ಮಾಡಿ ಬಟ್ಟೆ ಕಳಚಿ ಆಕೆಯನ್ನ ಎಳೆದುಕೊಂಡು ಹೋಗಿದ್ದಾರೆ. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಂಡಿದೆ. ಯಾವ ರೀತಿ ಸರ್ಕಾರ ಇದು. ಇದು ಅಕ್ಷಮ್ಯ ಅಪರಾಧ ಎಂದು ವಾಗ್ದಾಳಿ ನಡೆಸಿದರು. ಯಾರು ಪೊಲೀಸರು ಹೀಗೆ ಮಾಡಿದ್ರೋ ಆ ಪೊಲೀಸರನ್ನ ವಜಾ ಮಾಡಿ ಅವರಿಗೆ ಗುಂಡು ಹಾರಿಸಬೇಕಿತ್ತು. ಸಿಎಂ ಸಿದ್ದರಾಮಯ್ಯಗೆ ಆಗ್ರಹ ಮಾಡ್ತೀನಿ ದೌರ್ಜನ್ಯ ಮಾಡಿದ ಪೊಲೀಸರು ಮಹಿಳೆಯ ಕಾಲು ಮುಟ್ಟಿ ಕ್ಷಮೆ ಕೇಳಬೇಕು. ಪೊಲೀಸರನ್ನ ವಜಾ ಮಾಡಬೇಕು. ಸಿಎಂ ಅಲ್ಲೇ ಇದ್ದಾರೆ, ಮಹಿಳೆ ಮನೆಗೆ ಹೋಗಿ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ದ್ರೌಪದಿ ವಸ್ತ್ರಾಪಹರಣ ಮಾಡಿದ ಹಾಗೆ ರಾಜ್ಯದಲ್ಲಿ ಕೌರವ ವಂಶಸ್ಥರಾದ ಸಿದ್ದರಾಮಯ್ಯ, ಡಿಕೆಶಿವಕುಮಾರ್ ಸರ್ಕಾರದಲ್ಲಿ ನಗ್ನ ಮಾಡಿದ್ದಾರೆ. ಮಹಿಳೆಯರಿಗೆ ಈ ಸರ್ಕಾರದಲ್ಲಿ ರಕ್ಷಣೆ ಇಲ್ಲ. ಕಾಂಗ್ರೆಸ್ ಕಾರ್ಪೊರೇಟರ್ ಇದ್ದಾರೆ ಅಂತ ಪೋಲೀಸರು ಅನಾಚಾರ, ಅತ್ಯಾಚಾರ ಮಾಡಿದ್ದಾರೆ. ಇದರ ಸಂಪೂರ್ಣ ಹೊಣೆ ಸಿಎಂ ಹೊರಬೇಕು ಎಂದು ಹರಿಹಾಯ್ದರು.
