ಉದಯವಾಹಿನಿ, ಚೆನ್ನೈ: ತಮಿಳುನಾಡಿನ ತಿರುಪ್ಪರನ್‌ಕುಂದ್ರಂ ದೀಪೋತ್ಸವ ವಿಚಾರವಾಗಿ ಮಧುರೈ ಹೈಕೋರ್ಟ್ ಪೀಠ ಹಿಂದೂಗಳಿಗೆ ದೀಪ ಬೆಳಗಲು ಅನುಮತಿ ನೀಡಿದೆ. ಈ ಮೂಲಕ ಡಿಎಂಕೆ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದ್ದು, ಭಕ್ತರ ಸಂತಸ ವ್ಯಕ್ತಪಡಿಸಿದ್ದಾರೆ.
ತಮಿಳುನಾಡಿನ ತಿರುಪ್ಪರನ್‌ಕುಂದ್ರಂ ದೀಪೋತ್ಸವ ವಿಚಾರ ಎರಡು ಧರ್ಮಗಳ ನಡುವೆ ವಿವಾದವನ್ನು ಹುಟ್ಟುಹಾಕಿದೆ. ಆದರೆ ಮಧುರೈ ಹೈಕೋರ್ಟ್ ಪೀಠ ಹಿಂದೂಗಳಿಗೆ ದೀಪ ಬೆಳಗಲು ಅನುಮತಿ ನೀಡಿದ್ದು, ಇದು ಎಡಪಂಥೀಯರು ಹಾಗೂ ತಮಿಳುನಾಡು ಸರ್ಕಾರಕ್ಕೆ ಪೆಟ್ಟು ಕೊಟ್ಟಂತಾಗಿದೆ.
ತಮಿಳುನಾಡು ಸರ್ಕಾರ ಮತ್ತು ಜಿಲ್ಲಾಡಳಿತದ ವಾದಗಳನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ತಿರಸ್ಕರಿಸಿದೆ. ದೇವಸ್ಥಾನದ ದೀಪ ಪ್ರಕರಣವನ್ನು ಆಲಿಸಿದ ನಂತರ, ಮಧುರೈ ಹೈಕೋರ್ಟ್ ಪೀಠ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ತಮಿಳುನಾಡು ಸರ್ಕಾರವು ದೇವಾಲಯವು ಜೈನ ದೇವಾಲಯ ಎಂದು ವಾದಿಸಿತ್ತು. ಇದಲ್ಲದೆ, ದೀಪಸ್ತಂಭವು ದರ್ಗಾದ ಆಸ್ತಿ ಎಂದು ವಕ್ಫ್ ಮಂಡಳಿ ಹೇಳಿಕೊಂಡಿತ್ತು. ಇದೀಗ ಮಧುರೈ ಹೈಕೋರ್ಟ್ ಪೀಠ ಹಿಂದೂಗಳಿಗೆ ದೀಪ ಬೆಳಗಲು ಅನುಮತಿ ನೀಡಿದೆ.
ಈ ಮೂಲಕ ಹೈಕೋರ್ಟ್ ತಮಿಳುನಾಡು ಸರ್ಕಾರದ ಅರ್ಜಿಯನ್ನು ವಜಾಗೊಳಿಸಿದ್ದು, ಸ್ಟಾಲಿನ್ ಸರ್ಕಾರಕ್ಕೆ ಭಾರೀ ಹಿನ್ನಡೆಯಾಗಿದೆ. ದೀಪ ಹಚ್ಚಲು ಜಗಳವಾಡಬೇಡಿ. ಈ ವಿಷಯದಲ್ಲಿ ಅನಗತ್ಯವಾದ ರಾಜಕೀಯ ನಡೆಯುತ್ತಿದೆ. ದೀಪಸ್ತಂಭ ದೇವಸ್ಥಾನಕ್ಕೆ ಸೇರಿದ್ದು, ಹೀಗಾಗಿ ಸ್ತಂಭದ ಬಳಿ ಜನರಿಗೆ ಹೋಗಲು ಅವಕಾಶ ಇಲ್ಲ ಎಂದು ತಿಳಿಸಿದೆ. ಜೊತೆಗೆ ಇದೇ ವೇಳೆ ಪುರಾತತ್ವ ಇಲಾಖೆಗೆ ಷರತ್ತುಗಳನ್ನು ವಿಧಿಸಲು ಹೈಕೋರ್ಟ್ ಸೂಚಿಸಿದೆ. ದೀಪೋತ್ಸವಕ್ಕೆ ಅನುಮತಿ ನೀಡಿದ ಏಕಸದಸ್ಯ ಪೀಠದ ಆದೇಶವನ್ನು ದ್ವಿಸದಸ್ಯ ಪೀಠ ಎತ್ತಿ ಹಿಡಿದಿದೆ
