ಉದಯವಾಹಿನಿ, ಪಾಟ್ನಾ(ಬಿಹಾರ): ಸಂಯುಕ್ತ ಜನತಾದಳ (ಆರ್ಜೆಡಿ) ಮುಖ್ಯಸ್ಥ ನಿತೀಶ್ ಕುಮಾರ್ ಅವರು ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮೂಲಕ ದೀರ್ಘಕಾಲದ ನಂತರ ರಾಷ್ಟ್ರ ರಾಜಕಾರಣಕ್ಕೆ ಮರಳುತ್ತಿರುವುದನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾಗತಿಸಿದರು. ನಿತೀಶ್ ಕುಮಾರ್ ಅವರು ಬಿಹಾರ ಮುಖ್ಯಮಂತ್ರಿಯಾಗಿದ್ದ ಅವಧಿಯು ರಾಜ್ಯದ ಇತಿಹಾಸದಲ್ಲಿ ‘ಸುವರ್ಣ ಅಧ್ಯಾಯ’. ಅವರು ರಾಜ್ಯದ ಪ್ರಗತಿಗೆ ಗಮನಾರ್ಹ ಕೊಡುಗೆ ನೀಡಿದ್ದಾರೆ ಎಂದು ಮಾಧ್ಯಮಗಳ ಜೊತೆ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದರು.
“ನಿತೀಶ್ ಕುಮಾರ್ 2005ರಿಂದ ಇಲ್ಲಿಯವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಅಧಿಕಾರಾವಧಿ ನಿಜವಾಗಿಯೂ ಅದ್ಭುತವಾಗಿತ್ತು. ರಾಜ್ಯದ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಿ ಬರೆಯಲ್ಪಡುವಂಥದ್ದು. ಶಾಸಕ, ಸಂಸದ, ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವರಾಗಿ ಅವರ ಸುದೀರ್ಘ ರಾಜಕೀಯ ಜೀವನದಲ್ಲಿ ಅವರು ಎಂದಿಗೂ ಕಳಂಕ ಹೊತ್ತವರಲ್ಲ. ಅವರ ಇಡೀ ಜೀವನವು ಭ್ರಷ್ಟಾಚಾರ ಆರೋಪಗಳಿಂದ ಮುಕ್ತವಾಗಿದೆ” ಎಂದು ಹೇಳಿದರು.
“ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ನಿತೀಶ್ ಅವರು ಬಿಹಾರದ ಪ್ರಗತಿಗೆ ಎಲ್ಲ ರೀತಿಯಲ್ಲೂ ಮಹತ್ವದ ಕೊಡುಗೆ ನೀಡಿದ್ದಾರೆ. ಅವರು ಮತ್ತೊಮ್ಮೆ ರಾಜ್ಯಸಭಾ ಸಂಸದರಾಗಿ ದೆಹಲಿಗೆ ಮರಳುತ್ತಿದ್ದಾರೆ. ನಾನು ಮತ್ತು ನಮ್ಮ ಎಲ್ಲಾ ಎನ್‌ಡಿಎ ಸಹೋದ್ಯೋಗಿಗಳು ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ನಿತೀಶ್ ಅವರ ಮುಖ್ಯಮಂತ್ರಿ ಅವಧಿಯನ್ನು ಬಿಹಾರದ ಜನರು ಯಾವಾಗಲೂ ಸ್ಮರಿಸುತ್ತಾರೆ ಮತ್ತು ಗೌರವಿಸುತ್ತಾರೆ” ಎಂದರು.
ನಾಮಪತ್ರ ಸಲ್ಲಿಸಿದ ನಿತೀಶ್: ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಇಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ನಬಿನ್, ಆರ್‌ಎಲ್‌ಎಂ ಮುಖ್ಯಸ್ಥ ಉಪೇಂದ್ರ ಕುಶ್ವಾಹ, ಬಿಜೆಪಿಯ ಶಿವೇಶ್ ಕುಮಾರ್ ಮತ್ತು ಜೆಡಿಯುನ ರಾಮ್ ನಾಥ್ ಠಾಕೂರ್ ಸೇರಿದಂತೆ ಇತರ ಎನ್‌ಡಿಎ ಅಭ್ಯರ್ಥಿಗಳು ರಾಜ್ಯಸಭೆಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸಿದರು.
ಇದಕ್ಕೂ ಮೊದಲು ಅವರು, ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡರು. “ಈ ಬಾರಿ ನಡೆಯುತ್ತಿರುವ ಚುನಾವಣೆಯಲ್ಲಿ ನಾನು ರಾಜ್ಯಸಭಾ ಸದಸ್ಯರಾಗಲು ಬಯಸುತ್ತೇನೆ. ನಿಮ್ಮೊಂದಿಗಿನ ನನ್ನ ಸಂಬಂಧವು ಭವಿಷ್ಯದಲ್ಲಿಯೂ ಮುಂದುವರಿಯುತ್ತದೆ. ಅಭಿವೃದ್ಧಿ ಹೊಂದಿದ ಬಿಹಾರವನ್ನು ನಿರ್ಮಿಸಲು ನಿಮ್ಮೊಂದಿಗೆ ಒಟ್ಟಾಗಿ ಕೆಲಸ ಮಾಡುವ ನನ್ನ ಸಂಕಲ್ಪವು ಸ್ಥಿರವಾಗಿರುತ್ತದೆ. ರಚನೆಯಾಗಲಿರುವ ಹೊಸ ಸರ್ಕಾರಕ್ಕೆ ನನ್ನ ಸಂಪೂರ್ಣ ಸಹಕಾರ ಮತ್ತು ಮಾರ್ಗದರ್ಶನ ಇರುತ್ತದೆ” ಎಂದು ಹೇಳಿದ್ದಾರೆ
