ಉದಯವಾಹಿನಿ, ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ- CBSC, ಗುರುವಾರ ಮಧ್ಯಪ್ರಾಚ್ಯದಲ್ಲಿ ಮಾರ್ಚ್ 11 ರವರೆಗೆ ನಿಗದಿಯಾಗಿದ್ದ 10 ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಅಭ್ಯರ್ಥಿಗಳಿಗೆ ಫಲಿತಾಂಶ ಘೋಷಣೆಯ ವಿಧಾನವನ್ನು ಸಿಬಿಎಸ್‌ಇ ನಂತರ ಪ್ರಕಟಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದ ಕೆಲವು ಭಾಗಗಳಾದ ಬಹ್ರೇನ್, ಇರಾನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿನ ಪ್ರಸ್ತುತ ಪರಿಸ್ಥಿತಿಯಿಂದಾಗಿ ಮಾರ್ಚ್ 11 ರವರೆಗೆ ನಿಗದಿಯಾಗಿದ್ದ 10 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಲು ಮಂಡಳಿ ನಿರ್ಧರಿಸಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸನ್ಯಾಮ್ ಭಾರದ್ವಾಜ್ ಹೇಳಿದ್ದಾರೆ. 12 ನೇ ತರಗತಿಗೆ ಮಾರ್ಚ್ 7ರಂದು ನಿಗದಿಯಾಗಿದ್ದ ಪರೀಕ್ಷೆಯನ್ನು ಈಗಾಗಲೇ ಮುಂದೂಡಲಾಗಿದೆ ಮತ್ತು ಭವಿಷ್ಯದ ಪರೀಕ್ಷೆಗಳಿಗಾಗಿ ಪರಿಸ್ಥಿತಿಯನ್ನು ಪರಿಶೀಲಿಸಲಾಗುವುದು. ಇದಕ್ಕೂ ಮೊದಲು, ಮಂಡಳಿಯು ಮಾರ್ಚ್ 2, 5 ಮತ್ತು 6 ರಂದು ಈ ಪ್ರದೇಶದಲ್ಲಿ ಎರಡೂ ತರಗತಿಗಳಿಗೆ ನಿಗದಿಯಾಗಿದ್ದ ಪರೀಕ್ಷೆಯನ್ನು ಮುಂದೂಡಿತ್ತು. ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಮಿಲಿಟರಿ ದಾಳಿ ನಡೆಸಿ ಇರಾನಿನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಹತ್ಯೆ ಮಾಡಿವೆ. ಈ ಮಿಲಿಟರಿ ದಾಳಿಯ ನಂತರ ಇರಾನ್ ಮುಖ್ಯವಾಗಿ ಇಸ್ರೇಲ್ ಮತ್ತು ಯುಎಇ, ಬಹ್ರೇನ್, ಕುವೈತ್, ಜೋರ್ಡಾನ್ ಮತ್ತು ಸೌದಿ ಅರೇಬಿಯಾ ಸೇರಿದಂತೆ ಹಲವಾರು ಗಲ್ಫ್ ರಾಷ್ಟ್ರಗಳಲ್ಲಿನ ಅಮೆರಿಕನ್ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ದಾಳಿಗಳನ್ನು ನಡೆಸಿದೆ.
