
ಉದಯವಾಹಿನಿ ದೇವರಹಿಪ್ಪರಗಿ: ಪ್ರತಿಯೊಬ್ಬ ವಿದ್ಯಾರ್ಥಿಯೂ ಓದಿನೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಮಾತ್ರ ಪರಿಪೂರ್ಣ ಶಿಕ್ಷಣ ಪಡೆದಂತಾಗುತ್ತದೆ ಆದಕಾರಣ ಶಿಸ್ತುಬದ್ಧ ಜೀವನಕ್ಕೆ ಕ್ರೀಡೆ ಅವಶ್ಯಕವಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಹೇಳಿದರು.
ಪಟ್ಟಣದಲ್ಲಿ ಶನಿವಾರದಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಶ್ರಯದಲ್ಲಿ ಸಂಘಟಿಸಲಿರುವ ಬೆಳಗಾವಿಯ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ 8ನೇ ಅಂತರ್ ಕಾಲೇಜುಗಳ ಅಥ್ಲೆಟಿಕ್ ಕ್ರೀಡಾಕೂಟದ ಪೂರ್ವ ತಯಾರಿಯನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು, ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂಲಸೌಕರ್ಯಕ್ಕೆ ಶೀಘ್ರದಲ್ಲಿ 2ಕೋಟಿ ರೂ ಅನುದಾನ ಮಂಜೂರು ಮಾಡಿಸಲಾಗುವುದು, ಬರುವ 5ನೇ ತಾರೀಕಿನಂದು ವಿಜಯಪುರದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಕ್ರೀಡಾಕೂಟಕ್ಕೆ ಸಚಿವರು ಚಾಲನೆ ನೀಡಲಿದ್ದಾರೆ ಅಂದು ಪಟ್ಟಣದಲ್ಲಿ ಸುಸಜ್ಜಿತ ಕಾಲೇಜಿನ ಕಟ್ಟಡದ ಜೊತೆ ಕ್ರೀಡಾಂಗಣ ನಿರ್ಮಾಣಕ್ಕೆ ಕ್ರೀಡಾ ಸಚಿವರಲ್ಲಿ ಮನವಿ ಮಾಡಲಾಗುವುದು. ಬರುವಂತ ದಿನಗಳಲ್ಲಿ ಮತಕ್ಷೇತ್ರದಲ್ಲಿ ರಸ್ತೆ, ಕುಡಿವ ನೀರು, ಶಿಕ್ಷಣ ಸೇರಿದಂತೆ ಅಗತ್ಯ ಮೂಲ ಸೌಲಭ್ಯವನ್ನು ಒದಗಿಸುವ ಮೂಲಕ ಮಾದರಿ ಕ್ಷೇತ್ರ ನಿರ್ಮಾಣಕ್ಕೆ ಎಲ್ಲರ ಬೆಂಬಲ ಬೇಕು ಎಂದರು.
ನಂತರ ಅಥ್ಲೆಟಿಕ್ ಕ್ರೀಡಾಕೂಟದ ಸ್ಮರಣಾರ್ಥಕವಾಗಿ ಹೊರತರಲಿರುವ ಸ್ಮರಣ ಸಂಚಿಕೆಗಾಗಿ ಕಾಲೇಜಿನ ಸಿಬ್ಬಂದಿಯವರೊಂದಿಗೆ ಫೋಟೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ಕಾಲೇಜಿನ 43 ಜನ ಕ್ರೀಡಾ ಪಟುಗಳಿಗೆ ಕ್ರೀಡಾ ಸಮವಸ್ತ್ರ ವಿತರಿಸಿದರು.ನಂತರ ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಪ್ರಸ್ತಾವಿಕವಾಗಿ ಕಾಲೇಜಿನ ಪ್ರಾಚಾರ್ಯರಾದ ಪ್ರೊ.ಅಶೋಕ ಹೆಗಡೆ ಅವರು ಮಾತನಾಡಿ ಕಾಲೇಜಿನ ಮೂಲಭೂತ ಸೌಕರ್ಯಗಳು ಒದಗಿಸುವ ಕುರಿತು ಶಾಸಕರಲ್ಲಿ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್ ಪಕ್ಷದ ಉಪಾಧ್ಯಕ್ಷರಾದ ರಿಯಾಜ್ ಯಲಗಾರ, ಜೆಡಿಎಸ್ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ವೀರೇಶ ಕುದುರಿ, ಕಾಲೇಜಿನ ದೈಹಿಕ ನಿರ್ದೇಶಕರಾದ ಡಾ. ಅಶೋಕಕುಮಾರ ಜಾಧವ, ಪ್ರೊ ಎಸ್ ಬಿ ಜಾಲವಾದಿ, ಅಧೀಕ್ಷಕರಾದ ಜಗನ್ನಾಥ್ ಸಜ್ಜನ್ ಸೇರಿದಂತೆ ಕಾಲೇಜಿನ ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ಪಟ್ಟಣದ ಪ್ರಮುಖರು, ಗಣ್ಯರು,ಪ ಪಂ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು
