ಉದಯವಾಹಿನಿ , ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆಯ ಪೊಲೀಸರ ವಿರುದ್ಧ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂಬ ಗಂಭೀರ ಆರೋಪವಿದ್ದು, ಈ ಸಂಬಂಧ ಮಹಿಳೆಯನ್ನು ಅರೆಬೆತ್ತಲೆಯ ಸ್ಥಿತಿಯಲ್ಲಿ ಪೊಲೀಸ್ ವಾಹನದೊಳಗೆ ಎಳೆದೊಯ್ಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ವೀಡಿಯೋ ಕುರಿತು ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ.
ಈ ಸಂಬಂಧ ಕರ್ನಾಟಕದ ಡಿಜಿಪಿ ಅವರಿಗೆ ಪತ್ರ ಬರೆದಿರುವ ಆಯೋಗದ ಅಧ್ಯಕ್ಷೆ ಶ್ರೀಮತಿ ವಿಜಯಾ ರಹಟ್ಕರ್ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಘಟನೆಯು ಮಹಿಳೆಯ ವ್ಯಕ್ತಿತ್ವದ ಗೌರವ, ವೈಯಕ್ತಿಕ ಸ್ವಾತಂತ್ರ‍್ಯ ಮತ್ತು ಲಿಂಗ ಆಧಾರಿತ ಹಿಂಸೆಯಿಂದ ರಕ್ಷಣೆಗೆ ಗಂಭೀರ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸದಿದ್ದರೆ ತಕ್ಷಣ ದಾಖಲಿಸಿ, ನ್ಯಾಯಸಮ್ಮತ, ನಿಷ್ಪಕ್ಷಪಾತ ಮತ್ತು ಸಮಯಬದ್ಧ ತನಿಖೆ ನಡೆಸಿ, ವೀಡಿಯೋ ಸಾಕ್ಷ್ಯಗಳನ್ನು ಪರಿಶೀಲಿಸಿ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಇಲಾಖಾತ್ಮಕ ಮತ್ತು ಕ್ರಿಮಿನಲ್ ಕ್ರಮ ಕೈಗೊಳ್ಳಿ. ಸಂತ್ರಸ್ಥ ಮಹಿಳೆಗೆ ಕಾನೂನು ಪ್ರಕಾರ ವೈದ್ಯಕೀಯ ನೆರವು, ಮಾನಸಿಕ ಬೆಂಬಲ, ಪುನರ್ವಸತಿ ಮತ್ತು ಪರಿಹಾರ ಒದಗಿಸಿ ಎಂದು ಸೂಚಿಸಿದ್ದು, ಹೀಗೆ ಕ್ರಮ ಕೈಗೊಂಡ ಬಗ್ಗೆ ವಿವರವಾದ ಮಾಹಿತಿಯನ್ನು 5 ದಿನಗಳೊಳಗೆ ಸಲ್ಲಿಸುವಂತೆ ಆಯೋಗ ಸೂಚಿಸಿದೆ.
