ಉದಯವಾಹಿನಿ, ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಜೆಟ್​ ಮೇಲೆ ಬೆಳಗಾವಿ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಜಿಲ್ಲಾ ವಿಭಜನೆ, ನೀರಾವರಿ ಯೋಜನೆ, ಪ್ರವಾಸೋದ್ಯಮ ಅಭಿವೃದ್ಧಿಗೆ ಅಗತ್ಯ ಅನುದಾನ, ರಾಣಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ, ರಾಣಿ ಚನ್ನಮ್ಮ ರಾಕ್ ಗಾರ್ಡನ್ ನಿರ್ಮಾಣ ಸೇರಿ ಅನೇಕ ಬೇಡಿಕೆಗಳಿಗೆ ಸರ್ಕಾರ ಸೊಪ್ಪು ಹಾಕದೇ ಇರುವುದು ಇಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಿದೆ‌. ಇವುಗಳನ್ನು ಹೊರತು ಪಡಿಸಿ, ಬಜೆಟ್​​ನಲ್ಲಿ ಜಿಲ್ಲೆಗೆ ಸಿಕ್ಕಿದ್ದೇನು ಎಂಬ ವರದಿ ಇಲ್ಲಿದೆ.

ಹೌದು, ವೀರರಾಣಿ ಬೆಳವಡಿ ಮಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಬೇಡಿಕೆ ಇಡಲಾಗಿತ್ತು. ಆದರೆ, ಸರ್ಕಾರ ಪ್ರಾಧಿಕಾರದ ಬದಲು, ಪ್ರತ್ಯೇಕ ಪ್ರತಿಷ್ಠಾನ ಘೋಷಿಸಿರುವುದು ಮಲ್ಲಮ್ಮನವರ ಅಭಿಮಾನಿಗಳಿಗೆ ಬೇಸರ ತಂದಿದೆ.

ಬೆಳಗಾವಿಯಲ್ಲಿ ನಡೆಯುವ ವಿಧಾನಮಂಡಲದ ಅಧಿವೇಶನದ ಬಂದೋಬಸ್ತ್‌ಗೆ ಆಗಮಿಸುವ ಒಂದು ಸಾವಿರ ಸಿಬ್ಬಂದಿಗೆ ಶಾಶ್ವತ ಬ್ಯಾರಕ್‌ ನಿರ್ಮಾಣಕ್ಕೆ 20 ಕೋಟಿ ರೂ. ಅನುದಾನ ಬಜೆಟ್​​ನಲ್ಲಿ ಘೋಷಿಸಲಾಗಿದೆ.
ಗಡಿ ಭಾಗದ ಕುಸ್ತಿಪಟುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬೆಳಗಾವಿ ತಾಲೂಕಿನ ಬೆಳಗುಂದಿ ಗ್ರಾಮದಲ್ಲಿ “ಕುಸ್ತಿ ಅಖಾಡ ನಿರ್ಮಾಣ” ಘೋಷಣೆ ಆಗಿದೆ.‌ ಇದು ಕುಸ್ತಿಪಟುಗಳು ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಲು ಅನುಕೂಲ ಆಗಲಿದೆ.
ಇನ್ನು ಐಟಿಬಿಟಿ ಪಾರ್ಕ್ ಸೇರಿ ಇಲ್ಲಿನ ಕೈಗಾರಿಕೋದ್ಯಮಿಗಳು ಅನೇಕ ನಿರೀಕ್ಷೆ ಇಟ್ಟಿದ್ದರು. ಆದರೆ, ಅದರ ಬದಲು ಉತ್ತರ ಕರ್ನಾಟಕದಲ್ಲಿ ಆರ್ಥಿಕ ಅಭಿವೃದ್ಧಿ ಮತ್ತು ಸ್ಥಳೀಯರಿಗೆ ಉದ್ಯೋಗಾವಕಾಶ ಕಲ್ಪಿಸುವ ದೃಷ್ಟಿಯಿಂದ ಬೆಳಗಾವಿ ಜಿಲ್ಲೆಯ ಸುಮಾರು 1,000 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್‌ನ್ನು ಅಭಿವೃದ್ಧಿಪಡಿಸುವುದಾಗಿ ಬಜೆಟ್​​ನಲ್ಲಿ ಘೋಷಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!