ಉದಯವಾಹಿನಿ, ಹಾವೇರಿ: ಜಿಲ್ಲೆಯ ವರದಾ, ಧರ್ಮಾ, ಕುಮದ್ವತಿ ಮತ್ತು ತುಂಗಭದ್ರಾ ನದಿಗಳ ಒಡಲು ಬಹುತೇಕ ಖಾಲಿ ಖಾಲಿಯಾಗಿದೆ. ಅಲ್ಲಲ್ಲಿ ಕೆಲವು ಗುಂಡಿಗಳಲ್ಲಿ ನೀರು ನಿಂತಿರುವುದು ಬಿಟ್ಟರೆ ಭಾಗಶಃ ಖಾಲಿಯಾಗಿದೆ. ಪರಿಣಾಮ ಈ ನದಿಗಳ ನೀರನ್ನೇ ಅವಲಂಬಿಸಿದ ನೂರಾರು ಗ್ರಾಮಗಳ ಜನರು ಹಾಗೂ ಜಾನುವಾರುಗಳು ಬೇಸಿಗೆ ಆರಂಭಕ್ಕೂ ಮುನ್ನ ಪರಿತಪಿಸುಂತಾಗಿದೆ. ಮಾರ್ಚ್ ತಿಂಗಳಲ್ಲಿಯೇ ಈ ರೀತಿಯಾದರೇ ಏಪ್ರಿಲ್, ಮೇ ಹಾಗೂ ಜೂನ್ ತಿಂಗಳಿನಲ್ಲಿ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಗಬಹು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹಳ್ಳಗಳು ಒಣಗಿ ನಿಂತಿವೆ. ತುಂಗಭದ್ರಾ ಮೇಲ್ದಂಡೆ ಯೋಜನೆ ಕಾಲುವೆಗಳಲ್ಲಿ ನೀರಿಲ್ಲ. ಧರ್ಮಾ ಮತ್ತು ಕುಮದ್ವತಿ ನದಿಗಳಲ್ಲಿ ಮರಳು, ಕಸ-ಕಡ್ಡಿಗಳು ಬಿಟ್ಟರೇ ಬೇರೇನೂ ಕಾಣುತ್ತಿಲ್ಲ. ವರದಾ ನದಿಯಲ್ಲಿ 12 ಬ್ಯಾರೇಜ್‌ಗಳಿದ್ದು ಬ್ಯಾರೇಜ್ ಅಕ್ಕ-ಪಕ್ಕದಲ್ಲಿ ನೀರಿದೆ. ಅದು ಬಿಟ್ಟರೇ ಉಳಿದಂತೆ ಖಾಲಿ ಖಾಲಿ. ತುಂಗಭದ್ರಾ ನದಿಯದ್ಧೂ ಕೂಡ ಇದೇ ಪರಿಸ್ಥಿತಿ. ಕಳೆದ ತಿಂಗಳು ನಡೆದ ವಿಜಯನಗರ ಜಿಲ್ಲೆಯ ಹೂವಿನಗಡಗಲಿ ತಾಲೂಕಿನ ಮೈಲಾರ ಜಾತ್ರೆ ನಿಮಿತ್ತವಾಗಿ ತುಂಗಭದ್ರಾ ನದಿಗೆ ನೀರಿ ಹರಿಸಲಾಗಿತ್ತು. ಈಗ ಅದು ಕೂಡ ಖಾಲಿ ಖಾಲಿಯಾಗಿದೆ. ನದಿಯ ಗುಂಡಿಗಳಲ್ಲಿ ಅಲ್ಪ-ಸ್ವಲ್ಲ ನೀರಿದ್ದು, ಪಂಪಸೆಟ್‌ಗಳ ಮೂಲಕ ಗುಂಡಿಗಳಲ್ಲಿ ನೀರನ್ನ ಸಹ ಖಾಲಿ ಮಾಡಲಾಗುತ್ತಿದೆ ಎಂದು ಬೇಸರ ಹೊರಹಾಕಿದ್ದಾರೆ.
