ಉದಯವಾಹಿನಿ , ಪಾಟ್ನಾ: ಇಲ್ಲಿನ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಕೆಲಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇಮೇಲ್‌ನಲ್ಲಿ ನ್ಯಾಯಾಲಯದ ಆವರಣದಲ್ಲಿ ಆರ್‌ಡಿಎಕ್ಸ್ ಆಧಾರಿತ ಸ್ಫೋಟಕಗಳನ್ನು ಇರಿಸಲಾಗಿದೆ ಎಂದು ಉಲ್ಲೇಖಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆದರಿಕೆ ಮೇಲ್ ಸ್ವೀಕರಿಸಿದ ತಕ್ಷಣ ನ್ಯಾಯಾಲಯದಲ್ಲಿ ವಕೀಲರು, ಸಿಬ್ಬಂದಿ, ನ್ಯಾಯಾಧೀಶರು ಮತ್ತು ಕಕ್ಷಿದಾರರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಯಿತು. ಸ್ಥಳಕ್ಕೆ ಪಿರ್‌ಬಹೋರ್ ಪೊಲೀಸ್ ಠಾಣೆಯ ಸಿಬ್ಬಂದಿ, ಬಾಂಬ್ ಡಿಸ್ಪೋಸಲ್ ಸ್ಕ್ವಾಡ್ ಮತ್ತು ಡಾಕ್ ಸ್ಕ್ವಾಡ್ ತಲುಪಿ ಸಂಪೂರ್ಣ ತಪಾಸಣೆ ನಡೆಸಿದರು. ಆದರೆ ಯಾವುದೇ ಅನುಮಾನಾಸ್ಪದ ವಸ್ತು ಅಥವಾ ಸ್ಫೋಟಕಗಳು ಪತ್ತೆಯಾಗಿಲ್ಲ. ಪೊಲೀಸರು ಇದು ಹುಸಿ ಬಾಂಬ್ ಬೆದರಿಕೆ ಎಂದು ಘೋಷಿಸಿದ್ದಾರೆ.
