ಉದಯವಾಹಿನಿ , ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಪೊಲೀಸರು & ಭದ್ರತಾ ಪಡೆಗಳು ನಡೆಸಿದ ಜಂಟಿ ಕಾರ್ಯಾಚರಣೆ ವೇಳೆ ಸರಿಸುಮಾರು 4 ಕೆಜಿಯಷ್ಟು ಐಇಡಿ (ಸುಧಾರಿತ ಸ್ಫೋಟಕ ಸಾಧನ) ನಿಷ್ಕ್ರಿಯಗೊಳಿಸಿದ್ದು, ಭಯೋತ್ಪಾದಕರ ಸಂಚನ್ನು ವಿಫಲಗೊಳಿಸಿವೆ. ಸ್ಫೋಟಕ ಸಾಧನ ನಿಷ್ಕ್ರಿಯಗೊಳಿಸಿ ವಶ ಪಡಿಸಿಕೊಂಡಿವೆ. ಇದು ಸಂಭವನೀಯ ದೊಡ್ಡ ದಾಳಿಯನ್ನ ತಪ್ಪಿಸಿದಂತಾಗಿದೆ. ಗುಪ್ತಚರ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದ ಸೇನೆ ಮತ್ತು ಪೊಲೀಸರು ಅರಣ್ಯ ಪ್ರದೇಶವನ್ನ ತೀವ್ರವಾಗಿ ಶೋಧಿಸಿದ್ದರು. ಈ ವೇಳೆ ಸ್ಫೋಟಕ್ಕೆ ಇಟ್ಟಿದ್ದ 4 ಕೆಜಿ ಐಇಡಿ ಯನ್ನ ಜಪ್ತಿ ಮಾಡಿದ್ದು, ಹೆಚ್ಚುವರಿ ಸಾಕ್ಷ್ಯಗಳನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಥನಮಂಡಿ ತಹಸಿಲ್‌ನ ಡೋರಿ ಮಾಲ್‌ನಲ್ಲಿರುವ ಕಲ್ಲಾರ್‌ನ ದಟ್ಟ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಪೊಲೀಸರು ಬುಧವಾರದಿಂದಲೇ ಕಾರ್ಯಾಚರಣೆ ಕೈಗೊಂಡಿದ್ದರು. ಅನುಮಾನಾಸ್ಪದ ಚಟುವಟಿಕೆಗಳು ನಡೆಯುತ್ತಿದ್ದ ಬಗ್ಗೆ ಗುಪ್ತಚರ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡಿದ್ದರು. ಈ ವೇಳೆ ಬಂಡೆಗಳ ಸಂದಿನಲ್ಲಿ ಅನುಮಾನಾಸ್ಪದ ವಸ್ತುಗಳು ಕಂಡುಬಂದವು. ಪರಿಶೀಲಿಸಿದಾಗ ಅದ್ರಲ್ಲಿ ಸುಮಾರು 4 ಕೆಜಿ ತೂಕದ ಅತ್ಯಾಧುನಿಕ ಸುಧಾರಿತ ಸ್ಫೋಟಕ ಸಾಧನಗಳಿದ್ದದ್ದು ಕಂಡುಬಂದಿತು. ಒಂದು ವೇಳೆ ಸ್ಫೋಟಗೊಂಡಿದ್ದರೆ, ಭಾರೀ ಪ್ರಮಾಣದಲ್ಲಿ ಹಾನಿಯಾಗುತ್ತಿತ್ತು ಎನ್ನಲಾಗಿದೆ. ಸದ್ಯ ಐಇಡಿ ವಶಕ್ಕೆ ಪಡೆದಿರುವ ಭದ್ರತಾ ಪಡೆಗಳು ವಿಧಿವಿಜ್ಞಾನ ವಿಶ್ಲೇಷಣೆಗಾಗಿ ರವಾನಿಸಿವೆ. ದಟ್ಟಾರಣ್ಯದಲ್ಲಿ ಕಾರ್ಯಾಚರಣೆ ಮುಂದುವರಿದಿದೆ.
