ಉದಯವಾಹಿನಿ : ದುಬೈ: ಪ್ರತ್ಯೇಕತಾವಾದಿ ಚಳವಳಿಯ ನಾಯಕರೊಬ್ಬರನ್ನು ಉಚ್ಚಾಟನೆ ಮಾಡಲಾಗಿದೆ ಎಂದು ಯೆಮೆನ್ ಹುಥಿ ಬಂಡುಕೋರರ ವಿರುದ್ಧ ಹೋರಾಡುವ ‘ಪ್ರೆಸಿಡೆನ್ಸಿಯಲ್ ಲೀಡರ್‌ಶಿಪ್ ಮಂಡಳಿ’ಯು ಬುಧವಾರ ತಿಳಿಸಿದೆ. ಮಾತುಕತೆಗಾಗಿ ಸೌದಿ ಅರೇಬಿಯಾಕ್ಕೆ ತೆರಳಲು ನಿರಾಕರಿಸಿದ ಬಳಿಕ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ ಎಂದು ಹುಥಿ ವಿರೋಧಿ ಪಡೆಗಳ ನಿಯಂತ್ರಣದಲ್ಲಿರುವ ಎಸ್ಎಬಿಎ ಸುದ್ದಿಸಂಸ್ಥೆ ವರದಿ ಮಾಡಿದೆ.
ಸೌದಿ ಬೆಂಬಲಿತ ಪಡೆಗಳು ಮತ್ತು ಯುಎಇ ಬೆಂಬಲಿತ ದಕ್ಷಿಣ ಪ್ರತ್ಯೇಕತಾವಾದಿ ಮಂಡಳಿ (ಎಸ್‌ಟಿಸಿ) ಮಧ್ಯೆ ಸಂಘರ್ಷ ನಡೆಯುತ್ತಿದ್ದು, ಎಸ್‌ಟಿಸಿ ನಾಯಕ ಐದಾರಸ್ ಅಲ್-ಜುಬೈದಿ ಉಚ್ಚಾಟನೆಯು ಹೊಸ ಬೆಳವಣಿಗೆಯಾಗಿದೆ. ಹುಥಿ ವಿರೋಧಿ ಗುಂಪಿನ ನಿರ್ಣಯದ ಬಗ್ಗೆ ಎಸ್‌ಟಿಸಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಲ್-ಜುಬೈದಿ ಅವರು ಸದ್ಯ ಅಜ್ಞಾತ ಸ್ಥಳಕ್ಕೆ ಪರಾರಿಯಾಗಿದ್ದಾರೆ.
ಇದಕ್ಕೂ ಮುನ್ನ, ಯೆಮೆನ್‌ನಲ್ಲಿ ಸೌದಿ ನೇತೃತ್ವದ ಕೂಟದ ವಕ್ತಾರ ಮೇಜರ್ ಜನರಲ್ ತುರ್ಕಿ ಅಲ್-ಮಾಲ್ಕಿ ಅವರು, *ಐದಾರಸ್ ಅಲ್-ಜುಬೈದಿ ಸೌದಿ ಅರೇಬಿಯಾಕ್ಕೆ ತೆರಳಬೇಕಿತ್ತು. ಆದರೆ ಮಂಡಳಿಯ ಇತರ ಸದಸ್ಯರೊಂದಿಗೆ ಅವರು ಸೌದಿಗೆ ತೆರಳಿಲ್ಲ’ ಎಂದು ಹೇಳಿದ್ದರು.
