ಉದಯವಾಹಿನಿ, ನವದೆಹಲಿ: ಭಾರತ ಏಕದಿನ ತಂಡದಿಂದ ಕೈ ಬಿಟ್ಟ ಬಳಿಕ ಮಹಾರಾಷ್ಟ್ರ ತಂಡದ ಬ್ಯಾಟ್ಸ್‌ಮನ್ ಋತುರಾಜ್ ಗಾಯಕ್ವಾಡ್ ದೇಶಿ ಕ್ರಿಕೆಟ್‌ನಲ್ಲಿ ರನ್ ಹೊಳೆ ಮುಂದುವರಿಸುತ್ತಿದ್ದಾರೆ. 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಗೋವಾ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಋತುರಾಜ್ ಗಾಯಕ್ವಾಡ್ ಶತಕವನ್ನು ಸಿಡಿಸಿದರು. ಆ ಮೂಲಕ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಭಾರತ ತಂಡದಿಂದ ಕೈ ಬಿಟ್ಟ ಬಿಸಿಸಿಐ ಆಯ್ಕೆದಾರರಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ ಈ ಶತಕದ ಮೂಲಕ ಅವರು ಲಿಸ್ಟ್ ಎ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.
ಜೈಪುರದ ಸೋನಿ ಸ್ಟೇಡಿಯಂನಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಋತುರಾಜ್ ಗಾಯಕ್ವಾಡ್, 131 ಎಸೆತಗಳಲ್ಲಿ 134 ರನ್‌ಗಳನ್ನು ಬಾರಿಸಿದರು. ಅರ್ಶಿನ್ ಕುಲಕರ್ಣಿ, ಅಂಕಿತ್ ಬಾವ್ನೆ ಹಾಗೂ ಪೃಥ್ವಿ ವಿಕೆಟ್ ಒಪ್ಪಿಸಿದ ಬಳಿಕ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ತೆರಳಿದ ಇವರು, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡುತ್ತಿದ್ದರು. ಆದರೆ ಮತ್ತೊಂದು ತುದಿಯಲ್ಲಿ ವಿಕೆಟ್‌ಗಳು ನಿರಂತರವಾಗಿ ಉರುಳುತ್ತಿದ್ದವು. 25 ರನ್‌ಗೆ 5 ವಿಕೆಟ್ ಕಳೆದುಕೊಂಡಿದ್ದ ಮಹಾರಾಷ್ಟ್ರ ನಂತರ, 53 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಏಕಾಂಗಿ ಹೋರಾಟ ನಡಸಿದ ಗಾಯಕ್ವಾಡ್, ಗೋವಾ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಂತರು. ಅವರು ತಮ್ಮ 94ನೇ ಲಿಸ್ಟ್ ಎ ಇನಿಂಗ್ಸ್‌ನಲ್ಲಿ 20ನೇ ಶತಕವನ್ನು ಪೂರ್ಣಗೊಳಿಸಿದರು. ಇದು ಅವರ ವಿಜಯ ಹಝಾರೆ ಟ್ರೋಫಿ ಟೂರ್ನಿಯ 15ನೇ ಶತಕವಾಗಿದೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಜಂಟಿ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ತಮ್ಮ ಸಹ ಆಟಗಾರ ಅಂಕಿತ್ ಬಾವ್ನೆ ಜೊತೆ ಹಂಚಿಕೊಂಡಿದ್ದಾರೆ.ಅನಧಿಕೃತ ಏಕದಿನ ಪಂದ್ಯಗಳಲ್ಲಿ ಭಾರತ ಎ ಪರ ಮೂರು ಶತಕಗಳು ಹಾಗೂ ಭಾರತ ಬಿ ತಂಡದ ಪರ ದೇವದತ್ ಟ್ರೋಫಿ ಟೂರ್ನಿಯಲ್ಲಿ ಒಂದು ಶತಕವನ್ನು ಗಳಿಸಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿಯೂ ಶತಕವನ್ನು ಬಾರಿಸಿದ್ದರು.
