ಉದಯವಾಹಿನಿ, ಕ್ರಿಕೆಟ್ ದಿಗ್ಗಜ ಮಹೇಂದ್ರ ಸಿಂಗ್ ಧೋನಿ ಅವರು ಪಾಡೆಲ್ ಕ್ಷೇತ್ರದಲ್ಲಿ ತಮ್ಮ ಹೂಡಿಕೆಯನ್ನು ಮತ್ತಷ್ಟು ವಿಸ್ತರಿಸಿದ್ದು, ‘7ಪ್ಯಾಡೆಲ್ ಎಂಎಸ್ ಧೋನಿ ’ ಅನ್ನು ದೇಶದ ಪ್ರಮುಖ ಪಾಡೆಲ್ ಇಕೋ ಸಿಸ್ಟಮ್ ಆಗಿರುವ ಪಾಡೆಲ್ ಪಾರ್ಕ್ ಇಂಡಿಯಾದೊಂದಿಗೆ ವಿಲೀನಗೊಳಿಸಿದ್ದಾರೆ. 2024ರ ಆಗಸ್ಟ್ ನಿಂದ ಜೆಎಸ್‌ಡಬ್ಲ್ಯು ಸ್ಪೋರ್ಟ್ಸ್‌ನ ಸ್ಥಾಪಕ ಹಾಗೂ ದೇಶದ ಬಹು ಕ್ರೀಡಾ ವಿಭಾಗಗಳ ಅತಿದೊಡ್ಡ ಕಾರ್ಪೊರೇಟ್ ಪ್ರವರ್ತಕರಲ್ಲಿ ಒಬ್ಬರಾದ ಪಾರ್ಥ್ ಜಿಂದಾಲ್, ಪಾಡೆಲ್ ಪಾರ್ಕ್ ಇಂಡಿಯಾದ ಆರಂಭಿಕ ಹೂಡಿಕೆದಾರರಲ್ಲಿ ಒಬ್ಬರಾಗಿದ್ದಾರೆ. ವಿಲೀನಗೊಂಡ ಘಟಕದಲ್ಲಿ ಎಂಎಸ್ ಧೋನಿ ಪಾಲುದಾರರಾಗಿ ಸೇರ್ಪಡೆಯಾಗಿರುವುದು, ದೇಶದಲ್ಲಿ ಪಾಡೆಲ್‌ನ ಮುಂದಿನ ಹಂತದ ವಿಸ್ತರಣೆಗೆ ಇನ್ನಷ್ಟು ವಿಶ್ವಾಸವನ್ನು ನೀಡಲಿದೆ.

ಈ ಕುರಿತು ಮಾತನಾಡಿದ ಮಹೇಂದ್ರ ಸಿಂಗ್ ಧೋನಿ, “ಭಾರತದಲ್ಲಿ ಒಂದು ಕೋಟಿಗೂ ಹೆಚ್ಚು ಪಾಡೆಲ್ ಆಟಗಾರರಿದ್ದಾರೆ. ಟೈಯರ್-1 ನಗರಗಳು ಪಾಡೆಲ್ ಎಷ್ಟು ವೇಗವಾಗಿ ಬೆಳೆಯಬಹುದು ಎಂಬುದನ್ನು ಈಗಾಗಲೇ ತೋರಿಸಿವೆ. ಮುಂದಿನ ಹಂತದಲ್ಲಿ ಈ ಕ್ರೀಡೆಯನ್ನು ಹೊಸ ಮಾರುಕಟ್ಟೆಗಳತ್ತ ಕೊಂಡೊಯ್ಯುವುದು ಹಾಗೂ ಮೆಟ್ರೋ ನಗರಗಳ ಹೊರಗೂ ವಿಸ್ತರಿಸುವುದು ನಮ್ಮ ಗುರಿಯಾಗಿದೆ. ಪಾಡೆಲ್ ಒಂದು ಸಾಮಾಜಿಕ ಕ್ರೀಡೆಯಾಗಿದ್ದು ಡಬಲ್ಸ್‌ನಲ್ಲಿ ಆಡಲಾಗುತ್ತದೆ. ಪಾಡೆಲ್ ಕೋರ್ಟ್‌ಗಳು ಲಭ್ಯವಾದಾಗ ಜನರು ಸಹಜವಾಗಿಯೇ ಈ ಕ್ರೀಡೆಯತ್ತ ಆಕರ್ಷಿತರಾಗುತ್ತಾರೆ,” ಎಂದು ಹೇಳಿದ್ದಾರೆ. ಪಾಡೆಲ್ ಪಾರ್ಕ್ ಇಂಡಿಯಾದ ಸಹ-ಸ್ಥಾಪಕ ನಿಖಿಲ್ ಸಚ್‌ದೇವ್ ಮಾತನಾಡಿ, “ಈ ಪಾಲುದಾರಿಕೆ ಭಾರತದಲ್ಲಿ ಪಾಡೆಲ್ ಹೇಗೆ ಬೆಳೆಯಬೇಕು ಎಂಬುದಕ್ಕೆ ಪ್ರತಿಬಿಂಬವಾಗಿದೆ. ‘7ಪ್ಯಾಡೆಲ್ ಎಂಎಸ್ ಧೋನಿ’ ಮತ್ತು ಪಾಡೆಲ್ ಪಾರ್ಕ್ ಇಂಡಿಯಾ ಒಟ್ಟಾಗಿ ಈ ಕ್ರೀಡೆಯನ್ನು ಇನ್ನಷ್ಟು ಬಲಪಡಿಸಲಿವೆ. ಎಂಎಸ್ ಧೋನಿ ಅವರ ನಾಯಕತ್ವ ಮತ್ತು ಮೌಲ್ಯಗಳು ನಮ್ಮ ಗುರಿಗಳಿಗೆ ಹೆಚ್ಚಿನ ಬಲ ನೀಡಲಿವೆ,” ಎಂದರು.

ನಿಖಿಲ್ ಸಚ್‌ದೇವ್, ಜಿಗರ್ ದೋಷಿ, ಪ್ರತೀಕ್ ದೋಷಿ ಮತ್ತು ರೋನಕ್ ದಫ್ತರಿ ಸ್ಥಾಪಿಸಿದ ಪಾಡೆಲ್ ಪಾರ್ಕ್ ಇಂಡಿಯಾ, ಭಾರತದ ಅತ್ಯಂತ ಸಮಗ್ರ ಪಾಡೆಲ್ ಪರಿಸರ ವ್ಯವಸ್ಥೆಯನ್ನು ನಿರ್ಮಿಸುವಲ್ಲಿ ಮುಂಚೂಣಿಯಲ್ಲಿದೆ. ಪ್ರಸ್ತುತ ಸಂಸ್ಥೆ 40ಕ್ಕೂ ಹೆಚ್ಚು ಸ್ವಂತ ಹಾಗೂ ನಿರ್ವಹಿತ ಕೋರ್ಟ್‌ಗಳನ್ನು ನಡೆಸುತ್ತಿದ್ದು, ದೇಶಾದ್ಯಂತ ಒಟ್ಟು 200ಕ್ಕೂ ಹೆಚ್ಚು ಕೋರ್ಟ್‌ಗಳ ಮೂಲಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಿದೆ. ಮುಂದಿನ ಒಂದು ವರ್ಷದೊಳಗೆ 400–500 ಕೋರ್ಟ್‌ಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದ್ದು, ಭಾರತಾದ್ಯಂತ ವಿಶ್ವಮಟ್ಟದ ಪಾಡೆಲ್ ಸೌಲಭ್ಯಗಳ ಪ್ರವೇಶವನ್ನು ಗಣನೀಯವಾಗಿ ಹೆಚ್ಚಿಸುವ ಉದ್ದೇಶ ಹೊಂದಿದೆ.

Leave a Reply

Your email address will not be published. Required fields are marked *

error: Content is protected !!