ಉದಯವಾಹಿನಿ, ಬಾಗಲಕೋಟೆ: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೂರ್ಣಾವಧಿ 5 ವರ್ಷ ಅಧಿಕಾರದಲ್ಲಿ ಮುಂದುವರಿಯಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ ಎಂದು ಕೂಡಲಸಂಗಮ ಬಸವಧರ್ಮ ಪೀಠದ ಪೀಠಾಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದ್ದಾರೆ.
ಕೂಡಲಸಂಗಮದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ಅವರ ಆಡಳಿತದ ದಾಖಲೆಗಳಿಗೆ ಸರಿಗಟ್ಟುವಂತೆ ಕಾರ್ಯನಿರ್ವಹಿಸಿದ್ದಾರೆ. ದೇವರಾಜ ಅರಸ್ ಅವರು ನಿಷ್ಠೆಯಿಂದ ಕೆಲಸ ಮಾಡಿದಂತೆ ಸಿದ್ದರಾಮಯ್ಯ ಕೂಡ ಅದೇ ನಿಷ್ಠೆಯಿಂದ ಆಡಳಿತ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ಬಸವಣ್ಣನವರ ಬಗ್ಗೆ ಅಪಾರ ಭಕ್ತಿ ಮತ್ತು ಶ್ರದ್ಧೆ ಹೊಂದಿದ್ದಾರೆ. ತಮ್ಮ ಪ್ರತಿಯೊಂದು ಭಾಷಣದಲ್ಲೂ ಬಸವತತ್ವವನ್ನು ಪ್ರಸ್ತಾಪಿಸುತ್ತಾರೆ. ಬಸವಣ್ಣನವರ ತತ್ವಗಳಿಗೆ ಅವರು ಅನುಯಾಯಿ ಹಾಗೂ ಅಭಿಮಾನಿಯಾಗಿದ್ದಾರೆ ಎಂಬುದು ಅವರ ನಡೆ-ನುಡಿಯಲ್ಲಿ ಸ್ಪಷ್ಟವಾಗಿ ಕಾಣುತ್ತದೆ ಎಂದರು.
