ಉದಯವಾಹಿನಿ, ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವೈಯಕ್ತಿಕವಾಗಿ ಕರೆ ಮಾಡದ ಕಾರಣ ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದ ಇನ್ನೂ ಅಂತಿಮಗೊಂಡಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ. ನಾನು ಒಪ್ಪಂದ ಮಾಡಿದ್ದೇನೆ. ಆದರೆ ಮೋದಿ ಅವರು ಟ್ರಂಪ್ ಅವರಿಗೆ ಕರೆ ಮಾಡಬೇಕಾಗಿತ್ತು. ಆದರೆ ಮೋದಿ ಕರೆ ಮಾಡಲಿಲ್ಲ ಎಂದು ಲುಟ್ನಿಕ್ ಪಾಡ್‌ಕ್ಯಾಸ್ಟ್‌ನಲ್ಲಿ ತಿಳಿಸಿದರು.
ಉದ್ಯಮಿಗಳು ಆಯೋಜಿಸಿದ್ದ ಆಲ್-ಇನ್ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಲುಟ್ನಿಕ್, ಭಾರತ ಮೊದಲು ಒಪ್ಪಂದವನ್ನು ಅಂತಿಮಗೊಳಿಸುತ್ತದೆ ಎಂದು ನಂಬಿ ಅಮೆರಿಕವು ಇತರ ದೇಶಗಳೊಂದಿಗೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಸಿತ್ತು ಎಂದು ಹೇಳಿದರು.
ನಾವು ಇಂಡೋನೇಷ್ಯಾ, ಫಿಲಿಪೈನ್ಸ್ ಮತ್ತು ವಿಯೆಟ್ನಾಂನೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಅವರಿಗಿಂತ ಮೊದಲು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಹುದು ಎಂದು ಭಾವಿಸಿದ್ದೆವು. ನಂತರ ಭಾರತ ವ್ಯಾಪಾರ ಒಪ್ಪಂದದಿಂದ ಹಿಂದೆ ಸರಿಯಿತು ಎಂದರು.
ನಾವು ಮೊದಲು ಒಪ್ಪಿಕೊಂಡಿದ್ದ ಆ ವ್ಯಾಪಾರ ಒಪ್ಪಂದದಿಂದ ಹಿಂದೆ ಸರಿದಿದ್ದೇವೆ. ನಾವು ಇನ್ನು ಮುಂದೆ ಅದರ ಬಗ್ಗೆ ಯೋಚಿಸುತ್ತಿಲ್ಲ ಎಂದು ಹೇಳಿದರು. ಲುಟ್ನಿಕ್ ಅವರ ಹೇಳಿಕೆಗಳಿಗೆ ಭಾರತ ಸರ್ಕಾರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಭಾರತ ಮತ್ತು ಅಮೆರಿಕದ ಮಧ್ಯೆ ವ್ಯಾಪಾರ ಒಪ್ಪಂದ ಮಾತುಕತೆ ನಡೆಯುತ್ತಿದ್ದರೂ ಇಲ್ಲಿಯವರಗೆ ಯಾವುದೇ ಸಹಿ ಬಿದ್ದಿಲ್ಲ. ಅಮೆರಿಕ ಡೈರಿ ಮತ್ತು ಕೃಷಿ ಉತ್ಪನ್ನಗಳನ್ನು ಭಾರತದಲ್ಲಿ ಮಾರಾಟ ಮಾಡಲು ಅನುಮತಿ ನೀಡಬೇಕೆಂದು ಬೇಡಿಕೆ ಇರಿಸಿದೆ. ಆದರೆ ಕೇಂದ್ರ ಸರ್ಕಾರ ಈ ಬೇಡಿಕೆಗೆ ಒಪ್ಪಿಗೆ ನೀಡದ ಕಾರಣ ಮಾತುಕತೆ ನಡೆಯುತ್ತಲೇ ಇದೆ.
