ಉದಯವಾಹಿನಿ, ತಮಿಳುನಾಡಿನ ತಿರುಪರನ್‌ಕುಂಡ್ರಂ ಬೆಟ್ಟಗಳ ಮೇಲಿರುವ, ಸುಬ್ರಮಣ್ಯ ದೇವಾಲಯಕ್ಕೆ ಸೇರಿದ ಕಲ್ಲಿನ ಕಂಬದಲ್ಲಿ (ದೀಪಥೂನ್) ಹಿಂದೂಗಳು ತಮ್ಮ ಧಾರ್ಮಿಕ ಪರಂಪರೆಯ ಪ್ರಕಾರ, ಕಾರ್ತಿಗೈ ದೀಪವನ್ನು ಬೆಳಗಿಸಲು ಅನುಕೂಲವಾಗುವಂತೆ, ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಹೈಕೋರ್ಟ್‌ನ ಮಧುರೈ ಪೀಠ ಮಂಗಳವಾರ ಎತ್ತಿಹಿಡಿದಿದೆ . ಈ ಆಚರಣೆಯು ಸಾರ್ವಜನಿಕ ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಭಂಗಗೊಳಿಸಬಹುದು ಎಂಬ ರಾಜ್ಯದ ಆತಂಕಗಳನ್ನು ಹೈಕೋರ್ಟ್ ಬಲವಾಗಿ ತಿರಸ್ಕರಿಸಿದೆ. ಇದರಿಂದಾಗಿ ದೀರ್ಘಕಾಲದ ಮತ್ತು ವಿವಾದಾತ್ಮಕ ಸಮಸ್ಯೆ ಅಂತ್ಯ ಕಂಡಿದೆ. ಹಿಂದೂಗಳ ಆರಾಧನೆಗೆ ಇದ್ದ ಅಡ್ಡಿಗಳು ನಿವಾರಣೆಯಾಗಿವೆ. ಹಿಂದೂಗಳ ಪರವಾಗಿ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ದೀಪೋತ್ಸವ ಆಚರಿಸಲು ಆದೇಶಿಸಿದ್ದರು. ಈ ತೀರ್ಪನ್ನು ಹೈಕೋರ್ಟಿನ ಮಧುರೈ ಪೀಠವು ಇದೀಗ ಎತ್ತಿ ಹಿಡಿದಿದೆ.
ತಿರುಪರನ್ ಕುಂಡ್ರಂ ಮುರುಗನ್ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ, ಮಧುರೈ ಜಿಲ್ಲಾಧಿಕಾರಿ ಮತ್ತು ಮಧುರೈ ನಗರ ಪೊಲೀಸ್ ಆಯುಕ್ತರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿ ನ್ಯಾಯಮೂರ್ತಿಗಳಾದ ಜಿ ಜಯಚಂದ್ರನ್ ಮತ್ತು ಕೆ ಕೆ ರಾಮಕೃಷ್ಣನ್ ಅವರ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. ‘ದೀಪ’ ಬೆಳಗುವ ವಿಷಯವನ್ನು “ಅನಗತ್ಯವಾಗಿ ರಾಜಕೀಯಗೊಳಿಸಲಾಗಿದೆ” ಎಂದು ವಿಭಾಗೀಯ ಪೀಠ ತಿಳಿಸಿದೆ. ತಮಿಳುನಾಡು ರಾಜ್ಯ ಸರಕಾರವು ಪ್ರಕಣವನ್ನು ರಾಜಕೀಯಗೊಳಿಸಿರುವುದನ್ನು ಪೀಠವು ಗಮನಿಸಿದೆ.
ಜಿಲ್ಲಾಡಳಿತವು ಈ ಸಮಸ್ಯೆಯನ್ನು ಮಧ್ಯಸ್ಥಿಕೆಯ ಮೂಲಕ ಸಮುದಾಯಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಒಂದು ಅವಕಾಶವಾಗಿ ಪರಿಗಣಿಸಬೇಕಿತ್ತು ಎಂದು ನ್ಯಾಯಾಲಯ ಗಮನಿಸಿದೆ. ಬೆಟ್ಟವು ಸಂರಕ್ಷಿತ ತಾಣವಾಗಿರುವುದರಿಂದ, ಅದರ ಮೇಲೆ ನಡೆಸುವ ಯಾವುದೇ ಚಟುವಟಿಕೆಯು ಕಾಯ್ದೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅದು ಹೇಳಿದೆ.
ದೀಪವನ್ನು ಬೆಳಗಿಸಬಹುದು ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಸಮಾರಂಭಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗುವುದು ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ASI) ಯೊಂದಿಗೆ ಸಮಾಲೋಚನೆಗೆ ಒಳಪಟ್ಟಿರುತ್ತದೆ ಎಂದು ಹೇಳಿತು.
