ಉದಯವಾಹಿನಿ, ನ್ಯೂಯಾರ್ಕ್(ಯುಎಸ್‌ಎ): ‘ಸುಂಕ ಸರದಾರ’ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಆಘಾತಕಾರಿ ಮಸೂದೆಯನ್ನು ಬೆಂಬಲಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವ ಭಾರತ, ಚೀನಾ, ಬ್ರೆಜಿಲ್ನಂತಹ ದೇಶಗಳ ಮೇಲೆ ಶೇ.500ರಷ್ಟು ಸುಂಕ ವಿಧಿಸಲು ಅವಕಾಶ ನೀಡುವ ಮಸೂದೆಯನ್ನು ಸೆನೆಟರ್ಗಳು ರೂಪಿಸಿದ್ದು, ಅದಕ್ಕೆ ಟ್ರಂಪ್ ಜೈ ಅಂದಿದ್ದಾರೆ.
ಈಗಾಗಲೇ ಭಾರತದ ಮೇಲೆ ಶೇ.50ರಷ್ಟು ಸುಂಕ ಹೇರಿರುವ ಅಮೆರಿಕದ ಅಧ್ಯಕ್ಷ ಅದನ್ನು ಮತ್ತಷ್ಟು ಹೆಚ್ಚಿಸುವ ಸುಳಿವನ್ನು ಇತ್ತೀಚೆಗಷ್ಟೇ ನೀಡಿದ್ದರು. ಇದರ ಬೆನ್ನಲ್ಲೇ, ಸೆನೆಟರ್ಗಳು ಪ್ರಸ್ತಾಪಿಸಿರುವ ಆಘಾತಕಾರಿ ಮಸೂದೆಯನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ರಷ್ಯಾ ನಿಯಂತ್ರಿಸಲು ಬೇರೆ ದೇಶಗಳಿಗೆ ಬರೆ: ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸೆನೆಟರ್ ಲಿಂಡ್ಸೆ ಗ್ರಹಾಂ, “ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಆಸ್ತಿ, ಪ್ರಾಣ ಹಾನಿ ವಿಪರೀತವಾಗಿದೆ. ಇದಕ್ಕೆ ಕೊನೆ ಹಾಡಬೇಕಿದೆ. ಆದರೆ, ಭಾರತ, ಚೀನಾ, ಬ್ರೆಜಿಲ್ ಸೇರಿದಂತೆ ಇತರ ರಾಷ್ಟ್ರಗಳು ರಷ್ಯಾದಿಂದ ಅಗ್ಗದ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿವೆ. ಇದರಿಂದ ರಷ್ಯಾಕ್ಕೆ ಹಣದ ಮೂಲ ಹೆಚ್ಚಾಗಿ, ಯುದ್ಧದಾಹವೂ ಮೆರೆಯುತ್ತಿದೆ” ಎಂದಿದ್ದಾರೆ.
“ಹೀಗಾಗಿ, ರಷ್ಯಾದಿಂದ ತೈಲ ಖರೀದಿಸುವ ರಾಷ್ಟ್ರಗಳನ್ನು ನಿರ್ಬಂಧಿಸಲು, ಅವುಗಳ ಮೇಲೆ ಶೇಕಡ 500 ರಷ್ಟು ಸುಂಕ ವಿಧಿಸುವ ಮಸೂದೆಯನ್ನು ಪರಿಚಯಿಸಲಾಗುವುದು. ಇದು ಭಾರತ, ಚೀನಾ, ಬ್ರೆಜಿಲ್ನಂತಹ ರಾಷ್ಟ್ರಗಳನ್ನು ಕಟ್ಟಿಹಾಕಲು ಸಾಧ್ಯವಾಗಲಿದೆ” ಎಂದು ಹೇಳಿದ್ದಾರೆ.”ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ರ ಯುದ್ಧದಾಹದಿಂದ ಉಕ್ರೇನ್ನಲ್ಲಿ ಮುಗ್ಧರು ಸಾವಿಗೀಡಾಗುತ್ತಿದ್ದಾರೆ. ಇದಕ್ಕೆ ‘ಇಂಧನ’ವಾಗಿರುವ ರಾಷ್ಟ್ರಗಳನ್ನು ನಿಯಂತ್ರಿಸಬೇಕಿದೆ. ಮುಂದಿನ ವಾರ ಮಸೂದೆ ಮಂಡಿಸಿ, ಮತದಾನಕ್ಕೆ ಹಾಕಲಾಗುವುದು” ಎಂದು ತಿಳಿಸಿದ್ದಾರೆ.
