ಉಯವಾಹಿನಿ, ಕೀವ್​, ಉಕ್ರೇನ್​: ಉಕ್ರೇನ್​ ಮೇಲೆ ರಷ್ಯಾ ದಾಳಿ ಮುಂದುವರೆಸಿದೆ. ರಾಜಧಾನಿ ಕೀವ್​ ಮೇಲೆ ರಷ್ಯಾ ತನ್ನ ಹೈಪರ್‌ಸಾನಿಕ್ ಒರೆಶ್ನಿಕ್ ಕ್ಷಿಪಣಿಯಿಂದ ದಾಳಿ ಮಾಡಿದೆ. ಸತತವಾಗಿ ನಾಲ್ಕು ವರ್ಷಗಳಿಂದ ನಡೆಯುತ್ತಿರುವ ರಷ್ಯಾ – ಉಕ್ರೇನ್​ ಯುದ್ದವನ್ನು ಕೊನೆಗೊಳಿಸಲು ಉಕ್ರೇನ್​ ಹಾಗೂ ಪಾಶ್ಚಿಮಾತ್ಯ ರಾಷ್ಟ್ರಗಳು ಹೆಣಗಾಡುತ್ತಿವೆ. ಅಷ್ಟೇ ಅಲ್ಲ ಯುದ್ಧ ಕೊನೆಗೊಂಡ ಬಳಿಕವೂ ಉಕ್ರೇನ್​ ರಕ್ಷಣೆಗೆ ಯುರೋಪ್​ ಸೇನೆ ನಿಯೋಜನೆಗೆ ಒಪ್ಪಿಕೊಂಡಿವೆ. ಆದರೆ, ನ್ಯಾಟೋ ರಕ್ಷಣಾ ಒಪ್ಪಂದದ ವಿಸ್ತರಣೆ ತಡೆಯುವುದೇ ರಷ್ಯಾದ ಗುರಿಯಾಗಿದ್ದು, ಉಕ್ರೇನ್​​ ನಲ್ಲಿ ಪಾಶ್ಚಿಮಾತ್ಯ ಪಡೆಗಳ ನಿಯೋಜನೆಯನ್ನು ಖಂಡಿಸಿದೆ ಮತ್ತು ಅದಕ್ಕೆ ಅವಕಾಶ ಮಾಡಿಕೊಡಲು ರಷ್ಯಾ ಸಿದ್ದವಿಲ್ಲ. ಹೀಗಾಗಿ ಅದು ಉಕ್ರೇನ್​ ಮೇಲೆ ದಾಳಿ ಮುಂದುವರೆಸಿದೆ.

ಉಕ್ರೇನ್​ ನಲ್ಲಿ ಯುರೋಪಿಯನ್​ ಪಡೆಗಳ ನಿಯೋಜನೆಯನ್ನು ಕಾನೂನುಬದ್ಧ ಮಿಲಿಟರಿ ಗುರಿಗಳೆಂದು ಪರಿಗಣಿಸಲಾಗುತ್ತದೆ ಎಂದು ರಷ್ಯಾದ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾರಿಯಾ ಜಖರೋವಾ ಗುರುವಾರ ಎಚ್ಚರಿಸಿದ್ದಾರೆ. ಉಕ್ರೇನ್ ಮತ್ತು ಅದರ ಅಮೆರಿಕನ್ ಮತ್ತು ಯುರೋಪಿಯನ್ ಮಿತ್ರರಾಷ್ಟ್ರಗಳನ್ನು ಯುದ್ಧದ ಅಕ್ಷ ಎಂದು ಬ್ರಾಂಡ್ ಮಾಡಿದ್ದಾರೆ.

ಪುಟಿನ್ ನಿವಾಸದ ಮೇಲಿನ ದಾಳಿಗೆ ಪ್ರತಿಯಾಗಿ ಕ್ಷಿಪಣಿ ದಾಳಿ: ಈ ನಡುವೆ ರಷ್ಯಾ ತನ್ನ ದಾಳಿಯನ್ನು ಮುಂದುವರೆಸಿದೆ, ಪ್ರತಿದಿನ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ರಷ್ಯಾದ ರಕ್ಷಣಾ ಸಚಿವಾಲಯವು ರಾತ್ರಿಯಿಡೀ ನಿಗದಿತ ಗುರಿಗಳ ಮೇಲೆ ಒರೆಶ್ನಿಕ್ ಹೈಪರ್ಸಾನಿಕ್ ಕ್ಷಿಪಣಿಯನ್ನು ಬಳಸಿದೆ ಎಂದು ಹೇಳಿದೆ. ಡಿಸೆಂಬರ್‌ನಲ್ಲಿ ರಷ್ಯಾದ ನಾಯಕ ವ್ಲಾಡಿಮಿರ್ ಪುಟಿನ್ ಅವರ ನಿವಾಸದ ಮೇಲೆ ನಡೆದ ಡ್ರೋನ್ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳು ನಡೆದಿವೆ ಎಂದು ಹೇಳಿದೆ. ಆ ದಾಳಿಯ ಹಿಂದೆ ತಾನು ಇದ್ದೇನೆ ಎಂಬುದನ್ನು ಉಕ್ರೇನ್ ನಿರಾಕರಿಸಿದೆ.

ದಾಳಿಯ ಕುರಿತು ಮಾಸ್ಕೋ ಯಾವುದೇ ಇತರ ವಿವರಗಳನ್ನು ನೀಡಿಲ್ಲ. ಆದರೆ, ಉಕ್ರೇನಿಯನ್ ಅಧಿಕಾರಿಗಳು ಪಶ್ಚಿಮ ನಗರವಾದ ಎಲ್ವಿವ್ ಬಳಿ ಮೂಲಸೌಕರ್ಯ ಸೌಲಭ್ಯದ ಮೇಲೆ ಹೈಪರ್ಸಾನಿಕ್ ವೇಗದಲ್ಲಿ ಚಲಿಸುವ ಬ್ಯಾಲಿಸ್ಟಿಕ್ ಕ್ಷಿಪಣಿಯಿಂದ ದಾಳಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ದಾಳಿಯಲ್ಲಿ ಕನಿಷ್ಠ ನಾಲ್ಕು ಮಂದಿ ಸಾವು: ಕೀವ್​ ನಗರದಾದ್ಯಂತ ನಡೆದ ಡ್ರೋನ್ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಮತ್ತು ತುರ್ತು ರಕ್ಷಣಾ ಕಾರ್ಯಕರ್ತರು ಸೇರಿದಂತೆ ಕನಿಷ್ಠ 24 ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಎಡದಂಡೆಯಲ್ಲಿರುವ ವಸತಿ ಕಟ್ಟಡ ಮೇಲೆ ನಡೆದ ಎರಡನೇ ದಾಳಿಯಲ್ಲಿ ಒಬ್ಬ ವೈದ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!