ಉದಯವಾಹಿನಿ, ಚಂಡೀಗಢ: ಉತ್ತರ ಭಾರತದ ಕೆಲವು ಭಾಗಗಳಲ್ಲಿ ಶೀತ ವಾತಾವರಣ ತೀವ್ರಗೊಂಡಿದೆ. ದಟ್ಟಮಂಜಿನಿಂದ ರಸ್ತೆಗಳೇ ಕಾಣದಂತೆ ಮುಚ್ಚಿಹೋಗಿವೆ. ಈ ಮಧ್ಯೆ ಕಡಿಮೆ ಗೋಚರತೆಯಿಂದಾಗಿ ಸಂಭವಿಸಿದ ಸರಣಿ ಅಪಘಾತಗಳಲ್ಲಿ ನಾಲ್ವರು ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ಪಂಜಾಬ್ ಮತ್ತು ನೆರೆಯ ಹರಿಯಾಣ ಪ್ರದೇಶಗಳಲ್ಲಂತೂ ಅಕ್ಕಪಕ್ಕದಲ್ಲಿರುವವರೂ ಕಾಣದಷ್ಟು ಮಂಜು ಆವರಿಸುತ್ತಿದೆ. ಭಾನುವಾರ (ಇಂದು), ಸೋಮವಾರ (ನಾಳೆ) ಉತ್ತರ ಭಾರತದಲ್ಲಿ ಶೀತಗಾಳಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಕೆಲ ದಿನಗಳಿಂದ ಕಾಶ್ಮೀರ ಕಣಿವೆ ಪ್ರದೇಶದಲ್ಲಿ ಶೂನ್ಯಕ್ಕಿಂತಲೂ ಕಡಿಮೆ ತಾಪಮಾನ ದಾಖಲಾಗಿದ್ದು, ಇದರ ಪರಿಣಾಮ ರಾಜಧಾನಿ ದೆಹಲಿಯಲ್ಲಿ ಶೀತ ಹೆಚ್ಚಾಗಿದೆ. ಜೊತೆಗೆ ಪಂಜಾಬ್‌ನ ಹಲವು ಭಾಗಗಳಲ್ಲಿ ಮೈಕೊರೆವ ಚಳಿ ಆವರಿಸಿದೆ. ಹೋಶಿಯಾರ್‌ಪುರದಲ್ಲಿ ಕನಿಷ್ಠ ತಾಪಮಾನ 1.1 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಹೋಶಿಯಾರ್‌ಪುರ – ದಾಸುಯಾ ರಸ್ತೆಯಲ್ಲಿ ಕಾರು ಮತ್ತು ಬಸ್ ನಡುವೆ ಡಿಕ್ಕಿಯಾಗಿ ನಾಲ್ವರು ಪುರುಷರು ಸಾವನ್ನಪ್ಪಿದ್ದಾರೆ, ಓರ್ವ ವ್ಯಕ್ತಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ದಟ್ಟ ಮಂಜಿನಿಂದ ಕಡಿಮೆ ಗೋಚರತೆಯಿಂದಾಗಿ ಅಪಘಾತ ಸಂಭವಿಸಿರೋದಾಗಿ ಪೊಲೀಸರು ತಿಳಿಸಿದ್ದಾರೆ.
