ಉದಯವಾಹಿನಿ, ವಾಷಿಂಗ್ಟನ್‌: ಇಸ್ಲಾಮಿಕ್ ಸ್ಟೇಟ್‌ ಗುಂಪಿನ ವಿರುದ್ಧ ಪ್ರತೀಕಾರಕ್ಕೆ ಮುಂದಾಗಿರುವ ಅಮೆರಿಕ ಮತ್ತೆ ʻಆಪರೇಷನ್‌ ಹಾಕೈʼ ಕಾರ್ಯಾಚರಣೆ ಆರಂಭಿಸಿದೆ. ಶನಿವಾರ ರಾತ್ರಿ ಸಿರಿಯಾದಂದ್ಯಂತ ಇರುವ ಐಸಿಸ್ ಉಗ್ರರ ವಿರುದ್ಧ ಅಮೆರಿಕ ಮತ್ತೊಮ್ಮೆ ವಾಯುದಾಳಿ ನಡೆಸಿದ್ದು, 30 ಕ್ಕೂ ಹೆಚ್ಚು ನೆಲೆಗಳನ್ನು ಧ್ವಂಸಗೊಳಿಸಿದೆ.
2025ರ ಡಿಸೆಂಬರ್‌ನಲ್ಲಿ ಐಸಿಸ್‌ ಉಗ್ರರ ದಾಳಿಗೆ ಮೂವರು ಅಮೆರಿಕನ್ನರ ಹತ್ಯೆಗೆ ಪ್ರತೀಕಾರವಾಗಿ ಅಮೆರಿಕ ಈ ದಾಳಿ ನಡೆಸಿದೆ. ಸುಮಾರು 36 ನೆಲೆಗಳ ಮೇಲೆ ಯುಎಸ್‌ ಯುದ್ಧ ವಿಮಾನಗಳು ಹಾಗೂ ಡ್ರೋನ್‌ಗಳ ಮೂಲಕ 90ಕ್ಕೂ ಹೆಚ್ಚು ಬಾಂಬ್‌ ದಾಳಿ ನಡೆಸಲಾಗಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ವಕ್ತಾರ ಕ್ಯಾಪ್ಟನ್ ಟಿಮ್ ಹಾಕಿನ್ಸ್ ತಿಳಿಸಿದ್ದಾರೆ.
F-15E ಫೈಟರ್ ಜೆಟ್‌ಗಳು, A-10 ಅಟ್ಯಾಕಿಂಗ್‌ ವಿಮಾನಗಳು, AC-130J ಗನ್‌ಶಿಪ್‌ಗಳು, MQ-9 ಡ್ರೋನ್‌ಗಳು ಮತ್ತು ಜೋರ್ಡಾನ್‌ನ F-16 ಗಳು ಸೇರಿದಂತೆ ಬಹು ವಿಮಾನಗಳಿಂದ ಅಮೆರಿಕ ಏರ್‌ಸ್ಟ್ರೈಕ್‌ ನಡೆಸಿದೆ. ಆದ್ರೆ ಈವರೆಗೆ ಯಾವುದೇ ಸಾವು-ನೋವುಗಳು ವರದಿಯಾಗಿಲ್ಲ.
ಐಸಿಸ್‌ ಉಗ್ರರ ಮೂಲಸೌಕರ್ಯ ಕೇಂದ್ರಗಳು, ಕಳ್ಳಸಾಗಣೆ ಮಾರ್ಗಗಳು, ಶಸ್ತ್ರಾಸ್ತ್ರ ಸಂಗ್ರಹಣಾ ‌ಕೇಂದ್ರಗಳು ಸೇರಿ ಸುಮಾರು 36 ನೆಲೆಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಐಸಿಸ್‌ ಕಾರ್ಯಾಚರಣೆಯ ಸಾಮರ್ಥ್ಯ ಕುಗ್ಗಿಸುವುದು, ಭಯೋತ್ಪಾದನೆಯನ್ನ ಬುಡ ಸಮೇತ ಕಿತ್ತೊಗೆಯುವುದು, ಜೊತೆಗೆ ಈ ಪ್ರದೇಶದಲ್ಲಿ ಅಮೆರಿಕನ್‌ ಮತ್ತು ಮಿತ್ರಪಡೆಗಳ ಮೇಲೆ ಭವಿಷ್ಯದ ದಾಳಿಗಳನ್ನ ತಡೆಯುವುದು ಇದರ ಹಿಂದಿನ ಉದ್ದೇಶವಾಗಿದೆ ಎಂದು ಹಾಕಿನ್ಸ್ ಎಕ್ಸ್‌ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!