ಉದಯವಾಹಿನಿ, ಟೆಹ್ರಾನ್ : ಇರಾನ್‌ನಾದ್ಯಂತ ಸರ್ವಾಧಿಕಾರಿ ಖಮೇನಿ ವಿರೋಧಿ ಪ್ರತಿಭಟನೆಗಳು ದೊಡ್ಡ ಪ್ರಮಾಣದಲ್ಲೆ ಬೆಳೆದಿರುವ ಬೆನ್ನಲ್ಲೇ, ಪ್ರತಿಭಟನಾಕಾರರನ್ನು ಸೇನಾ ಪಡೆಗಳು ನಿರ್ದಯವಾಗಿ ಸಾಯಿಸುತ್ತಿವೆ ಎಂಬ ವರದಿಗಳು ಲಭಿಸಿವೆ. ಹೀಗಾಗಿ ಇರಾನ್‌ನಾದ್ಯಂತದ ಆಸ್ಪತ್ರೆಗಳು ಸ್ಥಿತಿ ನಿಭಾಯಿಸಲು ಹೆಣಗಾಡುತ್ತಿವೆ. ಹೆಣಗಳ ರಾಶಿಯಿಂದ ಆಸ್ಪತ್ರೆಗಳು ತುಂಬಿ ಹೋಗುತ್ತಿವೆ ಎಂದು ವೈದ್ಯಕೀಯ ಸಿಬ್ಬಂದಿ ತಿಳಿಸಿದ್ದಾರೆ.
ಇರಾನ್ ಸರ್ಕಾರ ಜನರ ಸಾವಿನ ಬಗ್ಗೆ ಮಾಹಿತಿ ನೀಡುತ್ತಿಲ್ಲ. ಮಾನವ ಹಕ್ಕು ಸಂಸ್ಥೆಯೊಂದರ ಪ್ರಕಾರ 116 ಜನ 14 ದಿನಗಳ ಹಿಂಸೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಕೆಲವು ವರದಿಗಳ ಪ್ರಕಾರ ಕಳೆದ 2 ದಿನದಲ್ಲಿ 2000 ಜನರು ಬಲಿಯಾಗಿದ್ದಾರೆ ಎಂದು ಇಸ್ರೇಲ್‌ನ ‘ಜೆರುಸಲೇಂ ಪೋಸ್ಟ್’ ವರದಿ ಮಾಡಿದೆ. ಭದ್ರತಾ ಪಡೆಗಳ ಹಿಂಸಾತ್ಮಕ ಕಾರ್ಯಾಚರಣೆ ಕಾರಣ ಟೆಹ್ರಾನ್ ಸೇರಿದಂತೆ ಹಲವಾರು ನಗರಗಳ ಆಸ್ಪತ್ರೆಗಳ ತುರ್ತು ವಾರ್ಡ್‌ಗಳಲ್ಲೇ ಒಂದರ ಮೇಲೊಂದು ದೇಹಗಳನ್ನು ರಾಶಿ ಹಾಕಲಾಗಿದೆ ಎಂದು ವರದಿಗಳು ಹೇಳಿವೆ.
‘ಉತ್ತರ ಇರಾನ್‌ನ ರಾಶ್ಟ್‌ನಲ್ಲಿರುವ ಪೌರ್ಸಿನಾ ಆಸ್ಪತ್ರೆಯಲ್ಲಿ ಶುಕ್ರವಾರ ರಾತ್ರಿ ಮಾತ್ರ 70 ಶವಗಳನ್ನು ತರಲಾಗಿದೆ. ಶವಾಗಾರವು ಪೂರ್ಣ ಸಾಮರ್ಥ್ಯವನ್ನು ತಲುಪಿದೆ. ಸ್ಥಳಾವಕಾಶ ಕಲ್ಪಿಸಲು ಸಿಬ್ಬಂದಿ ಶವಗಳನ್ನು ತೆಗೆದುಹಾಕಬೇಕಾಯಿತು. ಶವಗಳನ್ನು ಒಂದರ ಮೇಲೊಂದು ಇರಿಸಲಾಯಿತು. ಅದರಿಂದಲೂ ಶವಾಗಾರವು ತುಂಬಿದ ನಂತರ, ಶವಗಳನ್ನು ಆಸ್ಪತ್ರೆಯ ಪ್ರಾರ್ಥನಾ ಕೋಣೆಯಲ್ಲಿ ಜೋಡಿಸಲಾಯಿತು.’ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
