ಉದಯವಾಹಿನಿ, ಪಹಲ್ಲಾಮ್ ಭಯೋತ್ಪಾದಕ ದಾಳಿಯ ಸಂಚುಕೋರ ಸೈಫುಲ್ಲಾ ಕಸೂರಿ, ಪಾಕಿಸ್ತಾನದಲ್ಲೇ ನಡೆದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾನೆ. ತನ್ನನ್ನು ಕಂಡರೆ ಭಾರತ ಭಯಪಡುವುದಾಗಿ ಹೇಳಿಕೊಂಡಿರುವ ಅವನು, ಪಾಕಿಸ್ತಾನ ಸೇನೆಯ ಕಾರ್ಯಕ್ರಮಗಳಿಗೆ ತಾನು ಆಹ್ವಾನಿತರಾಗುತ್ತಿದ್ದೇನೆ ಎಂದು ಬಡಾಯಿ ಕೊಚ್ಚಿಕೊಂಡಿದ್ದಾನೆ.

ಪಾಕಿಸ್ತಾನದ ಶಾಲೆಯೊಂದರ ಸಮಾರಂಭದಲ್ಲಿ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಕಸೂರಿ, ತನ್ನ ಉಪಸ್ಥಿತಿಯಿಂದಲೇ ಭಾರತ ಆತಂಕಕ್ಕೆ ಒಳಗಾಗಿದೆ ಎಂದು ಹೇಳಿದ್ದಾನೆ. ಪಾಕ್ ಸೇನೆಯ ವಿವಿಧ ಕಾರ್ಯಕ್ರಮಗಳಿಗೆ, ಸೈನಿಕರ ಅಂತ್ಯಕ್ರಿಯೆಗಳಿಗೂ ಆಹ್ವಾನ ಬರುತ್ತಿದೆ ಎಂದು ಹೇಳುವ ಮೂಲಕ, ನಿಷೇಧಿತ ಲಷ್ಕರ್-ಎ-ತೈಬಾ ಸಂಘಟನೆಯೊಂದಿಗೆ ಪಾಕಿಸ್ತಾನ ಸೇನೆಯ ನಂಟನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾನೆ.

ಭಾರತ ನಡೆಸಿದ ‘ಆಪರೇಷನ್ ಸಿಂದೂರ್’ ಕುರಿತು ಪ್ರತಿಕ್ರಿಯಿಸಿದ ಅವನು, ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ಭಾರತ ದಾಳಿ ನಡೆಸಿರುವುದು ತಪ್ಪು ಎಂದು ಹೇಳಿದ್ದಾನೆ. ಕಾಶ್ಮೀರ ಸಂಬಂಧಿತ ಚಟುವಟಿಕೆಗಳಿಂದ ನಾವು ಹಿಂದೆ ಸರಿಯುವುದಿಲ್ಲ ಎಂಬುದನ್ನೂ ಅವನು ಹೇಳಿಕೊಂಡಿದ್ದಾನೆ.
ಈ ಹೇಳಿಕೆಗಳ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕಿಸ್ತಾನ ಹೇಳಿಕೊಳ್ಳುವ ನಿಲುವಿನ ನಿಜಮುಖವನ್ನು ಬಯಲು ಮಾಡಿದೆ.

Leave a Reply

Your email address will not be published. Required fields are marked *

error: Content is protected !!