ಉದಯವಾಹಿನಿ, ದುಬೈ: ಇರಾನ್ ದೇಶಾದ್ಯಂತ ನಡೆಯುತ್ತಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಲ್ಲಿನ ಸೇನೆ ಕಠಿಣ ಕ್ರಮ ಕೈಗೊಂಡಿದೆ. ಈ ಪರಿಣಾಮ ಕನಿಷ್ಠ 538 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಪ್ರತಿಭಟನಾಕಾರರಿಗೆ ಬೆಂಬಲ ನೀಡಲು ಅಥವಾ ರಕ್ಷಿಸಲು ಅಮೆರಿಕ ಹಾಗೂ ಇಸ್ರೇಲ್ ಮುಂದಾದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಇದೇ ವೇಳೆ, ಟೆಹ್ರಾನ್ ಎಚ್ಚರಿಕೆ ನೀಡಿದೆ.
ಎರಡು ವಾರಗಳಿಂದ ನಡೆಯುತ್ತಿರುವ ಪ್ರತಿಭಟನೆಗಳಲ್ಲಿ 10,600 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಅಮೆರಿಕ ಮೂಲದ ಮಾನವ ಹಕ್ಕುಗಳ ಕಾರ್ಯಕರ್ತರ ಸುದ್ದಿ ಸಂಸ್ಥೆ ತಿಳಿಸಿದೆ. ಇರಾನ್‌ನಲ್ಲಿ ಇಂಟರ್ನೆಟ್ ಅನ್ನು ಸ್ಥಗಿತಗೊಳಿಲಾಗಿದೆ. ಇದರಿಂದ ಫೋನ್ ಲೈನ್‌ಗಳು ಕಡಿತಗೊಂಡಿವೆ. ಹೀಗಾಗಿ ಈ ಬಗ್ಗೆ ನಿಖರ ಮಾಹಿತಿ ದೊರೆಯುವುದು ಅಸಾಧ್ಯವಾಗಿದೆ. ಇರಾನ್ ಸರ್ಕಾರವು ಒಟ್ಟಾರೆ ಸಾವು – ನೋವುಗಳ ಅಂಕಿ – ಅಂಶಗಳನ್ನು ನೀಡಿಲ್ಲ.
ವಿದೇಶಗಳಲ್ಲಿರುವವರಿಗೆ ಇರಾನ್ನಲ್ಲಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ನಿಖರವಾದ ಮಾಹಿತಿ ಸಿಗುತ್ತಿಲ್ಲ. ಈ ನಡುವೆ ಟೆಹ್ರಾನ್ ಹಾಗೂ ಇತರ ನಗರಗಳಿಗೆ ಭಾನುವಾರ ಪ್ರತಿಭಟನಾಕಾರರು ನುಗ್ಗಿದ್ದಾರೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ರಾಷ್ಟ್ರೀಯ ಭದ್ರತಾ ತಂಡವು ಇರಾನ್ ವಿರುದ್ಧ ಸೈಬರ್ ದಾಳಿಗಳು ಮತ್ತು ಅಮೆರಿಕ ಅಥವಾ ಇಸ್ರೇಲ್‌ನ ನೇರ ದಾಳಿಗಳು ಸೇರಿದಂತೆ ಹಲವಾರು ಸಂಭಾವ್ಯ ಪ್ರತಿಕ್ರಿಯೆಗಳ ಬಗ್ಗೆ ಯೋಚಿಸುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ.
