ಉದಯವಾಹಿನಿ, ಬೀಜಿಂಗ್: ಶಕ್ಸ್‌ಗಾಮ್ ಕಣಿವೆಯು ತನ್ನ ಭೂಭಾಗವಾಗಿದೆ ಎಂದು ಚೀನಾ ಪುನರುಚ್ಚರಿಸಿದ್ದು, ಅಲ್ಲಿ ಕೈಗೊಂಡಿರುವ ಮೂಲಸೌಕರ್ಯ ಯೋಜನೆಗಳು ಆಕ್ಷೇಪಕ್ಕೆ ಹೊರತಾಗಿವೆ ಎಂದು ಪ್ರತಿಪಾದಿಸಿದೆ. ಶಕ್ಸ್‌ಗಾಮ್ ಕಣಿವೆಯಲ್ಲಿ ಚೀನಾ ಕೈಗೊಂಡಿರುವ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಭಾರತ ಕಳೆದ ಆಕ್ಷೇಪ ವ್ಯಕ್ತಪಡಿಸಿತ್ತು. ಇದು ಭಾರತದ ಪ್ರದೇಶವಾಗಿರುವುದರಿಂದ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುವ ಹಕ್ಕುಗಳನ್ನು ಕಾಯ್ದಿರಿಸಿಕೊಂಡಿದೆ ಎಂದು ಹೇಳಿತ್ತು.
1963ರಲ್ಲಿ ಪಾಕಿಸ್ತಾನವು ಅಕ್ರಮವಾಗಿ ವಶಪಡಿಸಿಕೊಂಡ ಪ್ರದೇಶದಿಂದ ಭಾರತಕ್ಕೆ ಸೇರಿದ ಶಕ್‌ಗಾಮ್ ಕಣಿವೆಯ 5,180 ಚದರ ಕಿಲೋಮೀಟರ್ ಭೂಪ್ರದೇಶವನ್ನು ಅಕ್ರಮವಾಗಿ ಚೀನಾಕ್ಕೆ ಬಿಟ್ಟುಕೊಟ್ಟಿತ್ತು.
‘ಶಕ್ಸ್‌ಗಾಮ್ ಕಣಿವೆ ಭಾರತದ ಭೂಪ್ರದೇಶ. 1963ರಲ್ಲಿ ಸಹಿ ಹಾಕಿದ ಚೀನಾ-ಪಾಕಿಸ್ತಾನ ಗಡಿ ಒಪ್ಪಂದವೆಂದು ಕರೆಯಲಾಗುವ ಒಪ್ಪಂದವನ್ನು ನಾವು ಎಂದಿಗೂ ಒಪ್ಪಿಲ್ಲ ಮತ್ತು ಮಾನ್ಯತೆ ನೀಡಿಲ್ಲ. ಈ ಒಪ್ಪಂದವು ಕಾನೂನುಬಾಹಿರ ಮತ್ತು ಅಮಾನ್ಯವಾಗಿದೆ ಎಂದು ನಾವು ನಿರಂತರವಾಗಿ ಹೇಳುತ್ತಿದ್ದೇವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದರು.
‘ಪಾಕಿಸ್ತಾನ ಬಲವಂತವಾಗಿ ಮತ್ತು ಕಾನೂನುಬಾಹಿರವಾಗಿ ಆಕ್ರಮಿಸಿಕೊಂಡಿರುವ, ಭಾರತದ ಪ್ರದೇಶದ ಮೂಲಕ ಹಾದುಹೋಗುವ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಅನ್ನು ನಾವು ಮಾನ್ಯ ಮಾಡಿಲ್ಲ’ ಎಂದು ಹೇಳಿದ್ದರು.
ಜೈಸ್ವಾಲ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರೆ ಮಾವೋ ನಿಂಗ್, ‘ನೀವು ಹೇಳಿದ ಪ್ರದೇಶವು ಚೀನಾದ ಪ್ರದೇಶದ ಭಾಗವಾಗಿದೆ. ತನ್ನದೇ ಆದ ಭೂಪ್ರದೇಶದಲ್ಲಿ ಮೂಲಸೌಕರ್ಯ ಚಟುವಟಿಕೆಗಳನ್ನು ಕೈಗೊಂಡಿದೆ. ಚೀನಾ ಮತ್ತು ಪಾಕಿಸ್ತಾನ ಗಡಿ ಒಪ್ಪಂದಕ್ಕೆ ಸಹಿ ಹಾಕಿವೆ. 1960ರ ದಶಕದಿಂದಲೂ ಎರಡೂ ದೇಶಗಳ ನಡುವಿನ ಗಡಿಯನ್ನು ನಿರ್ಧರಿಸಿವೆ’ ಎಂದು ಹೇಳಿದ್ದಾರೆ.’ಇದು ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಮತ್ತು ಜನರ ಜೀವನೋಪಾಯವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಆರ್ಥಿಕ ಉಪಕ್ರಮವಾಗಿದೆ’ ಎಂದು ಮಾವೋ ನಿಂಗ್ ತಿಳಿಸಿದ್ದಾರೆ.
