ಉದಯವಾಹಿನಿ ಬ್ಯಾಂಕಾಕ್: ಮಹಿಳೆಯರ ಅಸಭ್ಯ ಭಂಗಿಯ ಡೀಪ್‌ಫೇಕ್ ಚಿತ್ರಗಳನ್ನು ಸಿದ್ಧಪಡಿಸಿದ್ದಕ್ಕೆ ಜಾಗತಿಕ ಮಟ್ಟದಲ್ಲಿ ಆಕ್ಷೇಪ ವ್ಯಕ್ತವಾದ ಬೆನ್ನಲ್ಲೇ ಇಲಾನ್ ಮಸ್ಕ್ ಒಡೆತನದ ಕೃತಕ ಬುದ್ಧಿಮತ್ತೆಯ ಚಾಟ್‌ಬಾಟ್ ಪ್ರೋಕ್‌ಗೆ ಇಂಡೊನೇಷ್ಯಾ ಹಾಗೂ ಮಲೇಷ್ಯಾ ತಾತ್ಕಾಲಿಕ ನಿಷೇಧ ಹೇರಿದೆ.
ಮಹಿಳೆಯರ ಚಿತ್ರಗಳನ್ನು ಅವರ ಅನುಮತಿ ಇಲ್ಲದೆ ಅಸಭ್ಯವಾಗಿ ಸಿದ್ದಪಡಿಸುವ ಪ್ರೋಕ್ ವಿರುದ್ಧ ಐರೋಪ್ಯ ರಾಷ್ಟ್ರಗಳು, ಭಾರತ, ಇಂಡೊನೇಷ್ಯಾ ಹಾಗೂ ಮಲೇಷ್ಯಾದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಕೃತಕ ಬುದ್ಧಿಮತ್ತೆ ಹಾಗೂ ಸಾಮಾಜಿಕ ಮಾಧ್ಯಮದ ಕುರಿತೇ ಪ್ರಶ್ನೆಗಳು ಮೂಡಿವೆ. ವೇರಿಫೈಡ್ ಬಳಕೆದಾರರಿಗೆ ಮಾತ್ರ ಈ ಸೌಲಭ್ಯವನ್ನು ಇತ್ತೀಚೆಗೆ ನೀಡಲಾಗಿತ್ತು. ಆದರೆ ಈ ರೀತಿ ಡೀಪ್‌ಫೇಕ್ ಚಿತ್ರಗಳನ್ನು ಸಿದ್ಧಪಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬುದಕ್ಕೆ ಕಂಪನಿ ಯಾವುದೇ ಉತ್ತರವನ್ನು ನೀಡಿಲ್ಲ.
ಇಂಥ ಡೀಪ್‌ಫೇಕ್ ಚಿತ್ರಗಳ ರಚನೆಗೆ ಯಾವುದೇ ನಿರ್ದಿಷ್ಟ ಸುರಕ್ಷತಾ ಮಾನದಂಡಗಳನ್ನು ಅಳವಡಿಸಲು ವಿಫಲವಾದ್ದರಿಂದ ಇಲಾನ್ ಮಸ್ಕ್ ಒಡೆತನದ ಪ್ರೋಕ್‌ಗೆ ತಾತ್ಕಾಲಿಕ ನಿಷೇಧ ಹೇರಿರುವುದಾಗಿ ಮಲೇಷ್ಯಾದ ಸಂವಹನ ಮತ್ತು ಮಲ್ಟಿಮೀಡಿಯಾ ಆಯೋಗವು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹೇಳಿದೆ.
‘ಇಂಥ ಸೌಲಭ್ಯಗಳನ್ನು ಪ್ರೋಕ್‌ನಲ್ಲಿ ನೀಡಿರುವುದರಿಂದ ಅಶ್ಲೀಲ ಚಿತ್ರಗಳ ತಯಾರಿಕೆಗೆ, ಲೈಂಗಿಕವಾಗಿ ದೌರ್ಜನ್ಯ ಎಸಗಲು, ಒಪ್ಪಿಗೆ ಇಲ್ಲದೆ ಒಬ್ಬರ ಚಿತ್ರಗಳನ್ನು ರಚಿಸುವುದು, ಮಹಿಳೆ ಹಾಗೂ ಮಕ್ಕಳಿರುವ ಚಿತ್ರಗಳನ್ನು ರಚಿಸುವುದು ಸೇರಿದಂತೆ ಹಲವು ಕಾನೂನು ಉಲ್ಲಂಘಿಸಿದ ಪ್ರಕರಣಗಳು ಪ್ರೋಕ್‌ನಿಂದ ಆಗಬಹುದಾಗಿರುವುದರಿಂದ ತಾತ್ಕಾಲಿಕ ನಿಷೇಧ ಹೇರಲಾಗುತ್ತಿದೆ’ ಎಂದು ತಿಳಿಸಿದೆ.
ಈ ಕುರಿತು ಜ. 3 ಹಾಗೂ ಜ. 8ರಂದು ಕಂಪನಿಗೆ ಮಲೇಷ್ಯಾ ಸರ್ಕಾರ ನೋಟಿಸ್ ಜಾರಿ ಮಾಡಿತ್ತು.
ಇಂಡೊನೇಷ್ಯಾದಲ್ಲೂ ಪ್ರೋಕ್‌ಗೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಈ ಕುರಿತು ಇಂಡೊನೇಷ್ಯಾ ಸಂವಹನ ಮತ್ತು ಡಿಜಿಟಲ್ ಸಚಿವ ಮಾಹಿತಿನೀಡಿದ್ದು, ‘ಡೀಪ್‌ಫೇಕ್ ಮೂಲಕ ಮಹಿಳೆಯರು ಹಾಗೂ ಮಕ್ಕಳ ಅಶ್ಲೀಲ ಚಿತ್ರಗಳು ಇಂಥ ಎಡಿಟಿಂಗ್ ಟೂಲ್ ಮೂಲಕ ಸಿದ್ಧವಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ.
