ಉದಯವಾಹಿನಿ, ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಮಕರ ಸಂಕ್ರಾಂತಿಯ ಶುಭ ಸಂದರ್ಭದಲ್ಲಿ ದೇಶಾದ್ಯಂತ ಲಕ್ಷಾಂತರ ಭಕ್ತರು ಪ್ರಮುಖ ಯಾತ್ರಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ. ಕೊರೆಯುವ ಚಳಿ ನಡುವೆಯೂ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಉತ್ತರ ಪ್ರದೇಶದ ಪ್ರಯಾಗ್‌ರಾಜ್, ಉತ್ತರಾಖಂಡದ ಹರಿದ್ವಾರ ಮತ್ತು ಪಶ್ಚಿಮ ಬಂಗಾಳದ ಗಂಗಾಸಾಗರದಲ್ಲಿ ಪವಿತ್ರ ಸ್ನಾನ ಮಾಡುತ್ತಿದ್ದಾರೆ.
ಪ್ರಯಾಗ್‌ರಾಜ್‌ನಲ್ಲಿ ಮಿನಿ ಕುಂಭಮೇಳ: ಕಳೆದ ವರ್ಷ ಮಹಾಕುಂಭಮೇಳಕ್ಕೆ ಸಾಕ್ಷಿಯಾಗಿದ್ದ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ಪ್ರಯಾಗ್‌ರಾಜ್‌ನಲ್ಲಿ ಭಾರಿ ಜನದಟ್ಟಣೆ ಕಂಡುಬಂದಿತು. ಚಳಿ ಇದ್ದರೂ ಮಂಜು ಆವರಿಸಿರಲಿಲ್ಲ. ಇದರಿಂದ, ದೇಶದ ಹಲವು ಮೂಲೆಗಳಿಂದ ಬಂದ ಭಕ್ತರು ಬ್ರಹ್ಮ ಮುಹೂರ್ತದಲ್ಲಿ ಪುಣ್ಯಸ್ನಾನ ಮಾಡಲು ಪ್ರಾರಂಭಿಸಿದರು.
ಸೂರ್ಯರಶ್ಮಿ ದಿಗಂತದಲ್ಲಿ ಮೂಡುತ್ತಿದ್ದಂತೆ ಯಾತ್ರಿಕರು ಸೂರ್ಯ ದೇವರಿಗೆ ಗಂಗೆಯನ್ನು ಅರ್ಪಿಸಿ ಓಂ ಸೂರ್ಯಾಯ ನಮಃ ಎಂದು ಜಪಿಸಿದರು. ಬೆಳಿಗ್ಗೆ 7 ಗಂಟೆಯ ಹೊತ್ತಿಗೆ 9.50 ಲಕ್ಷ ಭಕ್ತರು ಸ್ನಾನ ಮಾಡಿದ್ದಾರೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
“ಘಾಟ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಕಾರಣ, ಸಕಲ ಸಿದ್ಧತೆ ಮಾಡಲಾಗಿದೆ. ಎರಡು ದಿನಗಳಲ್ಲಿ ಸುಮಾರು ಒಂದು ಕೋಟಿ ಭಕ್ತರು ಪವಿತ್ರ ಸ್ನಾನ ಮಾಡುವ ನಿರೀಕ್ಷೆಯಿದೆ. ಭದ್ರತೆಗಾಗಿ ಪೊಲೀಸ್ ಪಡೆಗಳನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಎಲ್ಲಾ ಸ್ಥಳಗಳ ಮೇಲೆ ನಿಗಾ ವಹಿಸಲಾಗಿದೆ” ಎಂದು ಮಾಘ ಮೇಳ ಅಧಿಕಾರಿ ರಿಷಿ ರಾಜ್ ತಿಳಿಸಿದರು.
ಪೊಲೀಸ್ ಕಣ್ಗಾವಲು: 10 ಸಾವಿರ ಪೊಲೀಸ್ ಸಿಬ್ಬಂದಿಯನ್ನು ವಿವಿಧ ಘಾಟ್‌ಗಳಲ್ಲಿ ನಿಯೋಜಿಸಲಾಗಿದೆ. ಇದರ ಜೊತೆಗೆ, ಪ್ರಾಂತೀಯ ಸಶಸ್ತ್ರ ಕಾನ್‌ಸ್ಟಾಬ್ಯುಲರಿ (PAC), ಕ್ಷಿಪ್ರ ಕಾರ್ಯ ಪಡೆ (RAF), ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF), ಭಯೋತ್ಪಾದನಾ ನಿಗ್ರಹ ದಳ (ATS) ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪೊಲೀಸರು ನಿರಂತರವಾಗಿ ಗಸ್ತು ತಿರುಗುತ್ತಿದ್ದಾರೆ. ಡ್ರೋನ್‌ಗಳು, ಸಿಸಿಟಿವಿ ಕ್ಯಾಮೆರಾಗಳನ್ನು ಬಳಸಿ ಕಣ್ಗಾವಲು ಇಡಲಾಗಿದೆ ಎಂದು ಮಾಹಿತಿ ನೀಡಿದರು.
ಇತ್ತ, ಹರಿದ್ವಾರದಲ್ಲಿ ಹರ್ ಕಿ ಪೌರಿ ಮತ್ತು ಇತರ ಪ್ರಮುಖ ಘಾಟ್‌ಗಳಲ್ಲಿ ಪವಿತ್ರ ಗಂಗಾ ಸ್ನಾನಕ್ಕಾಗಿ ಭಾರಿ ಜನಸಮೂಹ ಜಮಾಯಿಸಿತು. ಹಿಮ ಚಳಿ ಮತ್ತು ಮುಂಜಾನೆಯ ಮಂಜಿನ ಹೊರತಾಗಿಯೂ, ಭಕ್ತರು “ಹರ್ ಹರ್ ಗಂಗೆ” ಮತ್ತು “ಹರ್ ಹರ್ ಮಹಾದೇವ್” ಎಂದು ಘೋಷಣೆ ಕೂಗುತ್ತಾ ಪುಣ್ಯಸ್ನಾನ ಮಾಡಿದರು.ಮೇಳವನ್ನು ಎಂಟು ವಲಯಗಳು ಮತ್ತು 22 ಸೆಕ್ಟರ್ಗಳನ್ನಾಗಿ ವಿಂಗಡಿಸಲಾಗಿದೆ. ಮ್ಯಾಜಿಸ್ಟ್ರೇಟ್‌ಗಳು, ವಲಯ ಅಧಿಕಾರಿಗಳು, ಪಿಎಸಿ, ಶ್ವಾನ ದಳಗಳು, ಬಾಂಬ್ ನಿಷ್ಕ್ರಿಯ ಘಟಕಗಳು, ಡೈವರ್‌ಗಳು, ಪೊಲೀಸರು, ಆಂಬ್ಯುಲೆನ್ಸ್‌ಗಳು ಮತ್ತು ಅಗ್ನಿಶಾಮಕ ದಳಗಳನ್ನು ನಿಯೋಜಿಸಲಾಗಿದೆ. ಸಿಸಿಟಿವಿ ಕಣ್ಗಾವಲು ಕೂಡ ಇಡಲಾಗಿದೆ.
ಬಂಗಾಳದ ಗಂಗಾಸಾಗರದಲ್ಲಿ ಜನವೋ ಜನ: ಪಶ್ಚಿಮ ಬಂಗಾಳದ ಹೂಗ್ಲಿ ನದಿ ಮತ್ತು ಬಂಗಾಳಕೊಲ್ಲಿಯ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಲು ಲಕ್ಷಾಂತರ ಯಾತ್ರಿಕರು ಸಾಗರ್ ದ್ವೀಪದ ಗಂಗಾಸಾಗರದಲ್ಲಿ ಒಟ್ಟುಗೂಡಿದರು.
