ಉದಯವಾಹಿನಿ , ಪ್ರಯಾಗರಾಜ್: ಮಕರ ಸಂಕ್ರಾಂತಿ ಅಂಗವಾಗಿ ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಾಘ ಮೇಳದಲ್ಲಿ ಗುರುವಾರ ಗಂಗಾ ನದಿ ಹಾಗೂ ಸಂಗಮದಲ್ಲಿ 21 ಲಕ್ಷಕ್ಕೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಮಾಘ ಮೇಳ ಆಡಳಿತದ ಅಧಿಕಾರಿಯೊಬ್ಬರ ಪ್ರಕಾರ, ಮಧ್ಯರಾತ್ರಿಯಿಂದಲೇ ಭಕ್ತರ ಸ್ನಾನ ಆರಂಭವಾಗಿದ್ದು, ಬೆಳಗ್ಗೆ 8 ಗಂಟೆ ಹೊತ್ತಿಗೆ ಸುಮಾರು 21 ಲಕ್ಷ ಮಂದಿ ಪವಿತ್ರ ಸ್ನಾನ ನೆರವೇರಿಸಿದ್ದಾರೆ. ಮಕರ ಸಂಕ್ರಾಂತಿಯ ಶುಭ ಕಾಲವು ದಿನವಿಡೀ ಮುಂದುವರಿಯುವ ಕಾರಣ, ಸಂಜೆಯ ವೇಳೆಗೆ ಯಾತ್ರಾರ್ಥಿಗಳ ಸಂಖ್ಯೆ ಒಂದು ಕೋಟಿಯನ್ನು ದಾಟುವ ನಿರೀಕ್ಷೆಯಿದೆ ಎಂದು ಹೇಳಿದರು.
ಸ್ಥಳೀಯ ಪುರೋಹಿತ ರವಿಶಂಕರ ಮಿಶ್ರಾ ಅವರು ಈ ದಿನದ ಧಾರ್ಮಿಕ ಮಹತ್ವವನ್ನು ವಿವರಿಸುತ್ತಾ, ಇಂದು ಮಕರ ಸಂಕ್ರಾಂತಿ ಸೂರ್ಯನು ಉತ್ತರಾಯಣದತ್ತ ಪ್ರಯಾಣ ಆರಂಭಿಸುವ ದಿನವಾಗಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗಿನ ಕಾಲವನ್ನು ಅತ್ಯಂತ ಶುಭಕರವೆಂದು ಪರಿಗಣಿಸಲಾಗುತ್ತದೆ. ಈ ದಿನ ಸೂರ್ಯ ದೇವರ ಪೂಜೆ ಮತ್ತು ಗಾಯತ್ರಿ ಮಂತ್ರ ಜಪವು ವಿಶೇಷ ಫಲ ನೀಡುತ್ತದೆ ಎಂಬ ನಂಬಿಕೆ ಇದೆ, ಎಂದು ಹೇಳಿದರು.
ವಿಭಾಗೀಯ ಆಯುಕ್ತರಾದ ಸೌಮ್ಯಾ ಅಗರ್ವಾಲ್ ಅವರು, ಏಳು ವಲಯಗಳಲ್ಲಿ 800 ಹೆಕ್ಟೇರ್ ಪ್ರದೇಶದಲ್ಲಿ ಮಾಘ ಮೇಳ ಮಾಡಲಾಗುತ್ತಿದೆ. ಮೇಳದ ಆವರಣದಲ್ಲಿ 25,000ಕ್ಕೂ ಹೆಚ್ಚು ಶೌಚಾಲಯಗಳನ್ನು ಸ್ಥಾಪಿಸಲಾಗಿದ್ದು, 3,500ಕ್ಕೂ ಹೆಚ್ಚು ಸ್ವಚ್ಛತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.ಅಷ್ಟೆ ಅಲ್ಲದೇ ಭಕ್ತರು ಅಲ್ಪಾವಧಿಯ ‘ಕಲ್ಪವಾಸ’ (ಆಧ್ಯಾತ್ಮಿಕ ಶುದ್ಧೀಕರಣಕ್ಕೆ ಮೀಸಲಾದ ಅವಧಿ) ಪಾಲಿಸಲು ಅನುಕೂಲವಾಗುವಂತೆ ಮಾಘ ಮೇಳದಲ್ಲಿ ವಿಶೇಷ ಟೆಂಟ್ ಸಿಟಿಯನ್ನು ನಿರ್ಮಿಸಲಾಗಿದೆ. ಇಲ್ಲಿ ಧ್ಯಾನ ಮತ್ತು ಯೋಗ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ. ಜೊತೆಗೆ ಭಕ್ತರ ಸಂಚಾರ ಸುಗಮಗೊಳಿಸಲು ಬೈಕ್ ಟ್ಯಾಕ್ಸಿ ಮತ್ತು ಗಾಲ್ಫ್ ಕಾರ್ಟ್ ಸೇವೆಗಳನ್ನೂ ವ್ಯವಸ್ಥೆ ಮಾಡಲಾಗಿದೆ ಎಂದು ಸೌಮ್ಯಾ ಅಗರ್ವಾಲ್ ತಿಳಿಸಿದ್ದಾರೆ.
