ಉದಯವಾಹಿನಿ , ಮುಂಬೈ: ಬೃಹನ್‌ಮುಂಬೈ ಮಹಾನಗರಪಾಲಿಕೆ ಚುನಾವಣೆಯಲ್ಲಿ ಶಿವಸೇನೆಯ ಕೋಟೆಯನ್ನು ಮಹಾಯುತಿ ಒಕ್ಕೂಟ ಛಿದ್ರಗೊಳಿಸಿದೆ. ಈ ಮೂಲಕ ಶಿವಸೇನೆಯ 30 ವರ್ಷಗಳ ಆಡಳಿತ ಕೊನೆಯಾಗಿದ್ದು, ಮೊದಲ ಬಾರಿಗೆ ಬಿಜೆಪಿಗೆ ಮೇಯರ್‌ ಪಟ್ಟ ಸಿಗುವ ಸಾಧ್ಯತೆಯಿದೆ. ಒಟ್ಟು 227 ವಾರ್ಡ್‌ಗಳ ಪೈಕಿ ಬಿಜೆಪಿ 90, ಶಿಂಧೆ ಶಿವಸೇನೆ 28 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ ಉದ್ದವ್‌ ಶಿವಸೇನೆ 64, ಕಾಂಗ್ರೆಸ್‌ 12, ಎನ್‌ಸಿಪಿ-ಎಸ್‌ಪಿ 1, ಇತರರು 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.
2017ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಶಿವಸೇನೆ 84, ಬಿಜೆಪಿ 51 ಸೇರಿ ಒಟ್ಟು 166 ವಾರ್ಡ್‌ಗಳನ್ನು ಗೆದ್ದುಕೊಂಡು ಅಧಿಕಾರಕ್ಕೆ ಏರಿತ್ತು.

ಕಾಂಗ್ರೆಸ್‌ 31, ಎನ್‌ಪಿ 9, ಎಂಎನ್‌ಎಸ್‌ 7, ಸಮಾಜವಾದಿ ಪಕ್ಷ 6, ಎಐಂಐಎಂ 2, ಅಖಿಲ ಭಾರತೀಯ ಸೇನಾ 1, ಪಕ್ಷೇತರರು 5 ಮಂದಿ ಗೆದ್ದಿದ್ದರು. 2020ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿಗೆ ಕೈಕೊಟ್ಟ ಶಿವಸೇನೆ ಕಾಂಗ್ರೆಸ್‌, ಎನ್‌ಸಿಪಿ ಜೊತೆ ಸೇರಿ ಮೈತ್ರಿ ಮಾಡಿಕೊಂಡಿತ್ತು. ನಂತರದ ಬೆಳವಣಿಗೆಯಲ್ಲಿ ಏಕನಾಥ್‌ ಶಿಂಧೆ ಬಣದ ಶಾಸಕರು ಶಿವಸೇನೆಯನ್ನು ತೊರೆದು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮಹಾಯುತಿ ಸರ್ಕಾರ ಅಧಿಕಾರಕ್ಕೆ ಬಂದಿತ್ತು. ಏಕನಾಥ್‌ ಶಿಂದೆ ಮುಖ್ಯಮಂತ್ರಿಯಾಗಿದ್ದರು.

ಈ ಮೈತ್ರಿ ನಂತರ ಲೋಕಸಭೆ, ವಿಧಾನಸಭೆ, ಸ್ಥಳೀಯ ಚುನಾವಣೆಯಲ್ಲೂ ಕಮಾಲ್‌ ಮಾಡುತ್ತಿದೆ. ಈ ಬಾರಿ ಚುನಾವಣೆಯಲ್ಲಿ ಠಾಕ್ರೆ ಸಹೋದರರಾದ ಉದ್ಧವ್‌ ಮತ್ತು ರಾಜ್‌ ಠಾಕ್ರೆ ಒಂದಾಗಿ ಚುನಾವಣೆ ಎದುರಿಸಿದ್ದರು. ಕಾಂಗ್ರೆಸ್‌ ಪ್ರತ್ಯೇಕವಾಗಿ ಸ್ಪರ್ಧೆ ಮಾಡಿತ್ತು. INDIA ಒಕ್ಕೂಟದಲ್ಲಿ ಶಿವಸೇನೆ, ಕಾಂಗ್ರೆಸ್‌ ಒಂದಾಗಿದ್ದರೂ ಪ್ರತ್ಯೇಕವಾಗಿ ಸ್ಪರ್ಧಿಸಿದ್ದು ಮಹಾಯುತಿಗೆ ವರವಾಯ್ತು.

Leave a Reply

Your email address will not be published. Required fields are marked *

error: Content is protected !!