ಉದಯವಾಹಿನಿ , ಭೋಪಾಲ್: ಕರ್ನಾಟಕದ ʻಗೃಹಲಕ್ಷ್ಮಿʼ ಮಾದರಿಯಲ್ಲೇ ಮಧ್ಯಪ್ರದೇಶದಲ್ಲಿ ಮಹಿಳೆಯರಿಗಾಗಿ ಆರಂಭಿಸಲಾದ ಲಾಡ್ಲಿ ಬೆಹನ್ ಯೋಜನೆಯೇ ಈಗ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಮಾಜಿ ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಅವರು ಆರಂಭಿಸಿದ ಈ ಯೋಜನೆ ಇಂದಿನ ಸರ್ಕಾರಕ್ಕೆ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ರಾಜ್ಯದ ಒಟ್ಟು ಸಾಲ 4,64,340 ಕೋಟಿ ರೂಪಾಯಿಗಳಿಗೆ ತಲುಪಿದ್ದು, ಪ್ರತಿ ವರ್ಷ 27,000 ಕೋಟಿ ರೂ.ಗಳಷ್ಟು ಬಡ್ಡಿಯನ್ನೇ ಪಾವತಿಸಬೇಕಾಗಿದೆ ಎಂದು ವರದಿಯಾಗಿದೆ.
ಹೌದು. 2023ರ ವಿಧಾನಸಭಾ ಚುನಾವಣೆ ವೇಳೆ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದ ಸರ್ಕಾರ ಲಾಡ್ಲಿ ಬೆಹನ್ ಯೋಜನೆ ಆರಂಭಿಸಿತು. ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಯೋಗಕ್ಷೇಮಕ್ಕಾಗಿ ಪ್ರತಿ ತಿಂಗಳು ಅರ್ಹ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 1,250 ರೂ. (ಹಿಂದೆ 1,000 ರೂ.) ಆರ್ಥಿಕ ಸಹಾಯ ನೀಡುವ ಯೋಜನೆ ಇದಾಗಿದೆ.
2023ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಸಿಎಂ ಆಗಿದ್ದ ಶಿವರಾಜ್ ಸಿಂಗ್ ಚೌಹಾಣ್ 1.25 ಕೋಟಿ ಮಹಿಳೆಯರ ಅನುಕೂಲಕ್ಕಾಗಿ ಈ ಯೋಜನೆ ಆರಂಭಿಸಿದ್ರು. ಎರಡೂವರೆ ವರ್ಷಗಳ ನಂತರ ಹಾಲಿ ಸಿಎಂ ಮೋಹನ್ ಯಾದವ್ (Mohan Yadav) ಅವರೂ ಈ ಯೋಜನೆಯನ್ನ ಮುಂದುವರಿಸಿದ್ದಾರೆ. ಆರಂಭದಲ್ಲಿ 1,000 ರೂ. ಇದ್ದ ಈ ಯೋಜನೆ ಹಣವನ್ನ ಬಳಿಕ 1,250 ರೂ.ಗಳಿಗೆ ಹೆಚ್ಚಿಸಲಾಯಿತು. ಇದು ಸರ್ಕಾರ ಮೇಲಿನ ಆರ್ಥಿಕ ಹೊರೆಯನ್ನ ಮತ್ತಷ್ಟು ಹೆಚ್ಚಿಸಿತು. ಏಕೆಂದ್ರೆ ವರ್ಷದಿಂದ ವರ್ಷಕ್ಕೆ ವೆಚ್ಚ ಏರಿಕೆಯಾಗುತ್ತಿದೆ, ಫಲಾನುಭವಿಗಳ ಸಂಖ್ಯೆಯಲ್ಲೂ ಏರಿಳಿತ ಕಂಡುಬರುತ್ತಿದೆ. ಆರಂಭದಲ್ಲಿ 1.29 ಕೋಟಿ ಇದ್ದ ಫಲಾನುಭವಿಗಳ ಸಂಖ್ಯೆ 2023ರ ಅಕ್ಟೋಬರ್ ವೇಳೆಗೆ 1.31 ಕೋಟಿಗೆ ತಲುಪಿತ್ತು. ಪ್ರಸ್ತುತ ಫಲಾನುಭವಿಗಳ ಸಂಖ್ಯೆ 1.25 ಕೋಟಿಗೆ ಕುಸಿದಿದೆ. ಕಳೆದ 30 ತಿಂಗಳಲ್ಲಿ 5.7 ಲಕ್ಷ ಅನರ್ಹ ಮಹಿಳೆಯರನ್ನ ಯೋಜನೆಯಿಂದ ತೆಗೆದುಹಾಕಲಾಗಿದೆ ಎನ್ನುತ್ತಿವೆ ಅಂಕಿ ಅಂಶಗಳು.
