ಉದಯವಾಹಿನಿ, ಚಿತ್ರದುರ್ಗ: ಜನರು ಕೊಟ್ಟ ಅಧಿಕಾರವನ್ನು ಕಾಂಗ್ರೆಸ್ ಸರ್ಕಾರ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೊಲ್ಲಹಳ್ಳಿಯಲ್ಲಿ ಮಾದ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ಹಾಗು ಇನ್ನೊಬ್ಬರು ಕಿತ್ತುಕೊಳ್ಳಲು ಯತ್ನಿಸುತ್ತಿದ್ದಾರೆ. ದಿನನಿತ್ಯ ನಾವು ರಾಜ್ಯದಲ್ಲಿ ನೋಡಿದಂತೆ, ಈ ಸರ್ಕಾರದಿಂದ ಜನತೆಗೆ ಅಪಮಾನ ಆಗುತ್ತಿದೆ. ಹೀಗಾಗಿ ಎಷ್ಟು ಬೇಗ ಈ ಸರ್ಕಾರ ಹೋಗುತ್ತದೋ ಆಗ ಜನರಿಗೆ ಒಳಿತಾಗುತ್ತದೆ. ಅಧಿಕಾರಕ್ಕಾಗಿ ದೆಹಲಿಯಲ್ಲಿ ಸರದಿಯಂತೆ ಓಡಾಡುತ್ತಿದ್ದಾರೆ. ಆದರೆ ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡೇ ಇಲ್ಲ. ಕಾಂಗ್ರೆಸ್ ಹೈಕಮಾಂಡ್ ಅಸ್ತಿತ್ವದಲ್ಲಿದೆಯೋ ಇಲ್ವೋ ಕೂಡ ಗೊತ್ತಿಲ್ಲ. ಕಳೆದ ಆರು ತಿಂಗಳಿಂದ ಇದು ನಡೆಯುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಒಂದು ಮಾತೂ ಹೇಳುತ್ತಿಲ್ಲ. ಅವರನ್ನು ಕಾಂಗ್ರೆಸ್ ಹೈಕಮಾಂಡ್ ಕರಿಯುತ್ತೇವೆ ಎನ್ನುವುದರಲ್ಲೇ ಇದೆ. ಇದೇನು ಅವರ ಸ್ವಂತ ಆಸ್ತಿನಾ ಎಂದು ಕಿಡಿಕಾರಿದರು.

ಕರ್ನಾಟಕದ ಟಾರ್ಮ್ಯಾಕ್‌ನಲ್ಲಿ ನಿಂತು ಮಾತಾಡಿ ಅವಮಾನ ಮಾಡಿದ್ದಾರೆ. ಸುಖಾಸುಮ್ಮನೆ ಕೈ ನಾಯಕರು ದೆಹಲಿಗೆ ಹೋಗಿ ಅವರ ಮನೆ ಬಾಗಿಲು ಕಾಯುವ ಕೆಲಸವಾಗುತ್ತದೆ. ನಮ್ಮ ಜನರು ಕೊಟ್ಟ ಅಧಿಕಾರಕ್ಕೆ ಅಪಮಾನ ಮಾಡುತ್ತಿದ್ದಾರೆ. ಇಡೀ ರಾಜ್ಯದ ಜನರಿಗೆ ಈ ಸರ್ಕಾರ ಅಪಮಾನ ಮಾಡುತ್ತಿದೆ. ಹೀಗಾಗಿ ಈ ಸರ್ಕಾರದ ವಿರುದ್ಧ ಬಿಜೆಪಿಯಿಂದ ರಾಜ್ಯದಲ್ಲಿ ಆರೇಳು ಸಮಾವೇಶ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಎರಡೂವರೆ ವರ್ಷದಿಂದ ಅರಾಜಕತೆ ಹಾಗು ಕಾನೂನು ಸುವ್ಯವಸ್ಥೆ ಸರಿಯಿಲ್ಲ, ಅಭಿವೃದ್ಧಿ ಇಲ್ಲ ಹಾಗೂ ಭ್ರಷ್ಟಾಚಾರ ತುಂಬಿರುವ ಪರಿಣಾಮ ಕಾನೂನು ಸುವ್ಯವಸ್ಥೆ ಬಗ್ಗೆ ಬಳ್ಳಾರಿಯಿಂದ ಹೋರಾಟ ಶುರು ಮಾಡುತ್ತಿದ್ದೇವೆ ಎಂದರು.

Leave a Reply

Your email address will not be published. Required fields are marked *

error: Content is protected !!