ಉದಯವಾಹಿನಿ, : ಅಧಿಕಾರಕ್ಕೆ ಬಂದಂದಿನಿಂದ ಮಹಿಳಾ ಹಾಗೂ ಮಕ್ಕಳ ವಿರುದ್ಧ ಹಲವು ಕಾನೂನುಗಳನ್ನು ತಂದು ಈಗಾಗಲೇ ಜಾಗತಿಕ ಮಟ್ಟದಲ್ಲಿ ಕೆಂಗಣ್ಣಿಗೆ ಗುರಿಯಾಗಿರುವ ತಾಲಿಬಾನ್ ಪಡೆ ಇದೀಗ ಮತ್ತೊಂದು ಮಹಿಳಾವಿರೋಧಿ ಕಾನೂನುಗಳನ್ನು ಜಾರಿಗೊಳಿಸಲು ಸಿದ್ಧತೆ ನಡೆಸಿದೆ. ಮಹಿಳೆಯರ ಕೂದಲು ಹಾಗೂ ಸೌಂದರ್ಯ ಸಂಬಂಧಿ ಸೆಲೂನ್‌ಗಳನ್ನು ಮುಚ್ಚಲು ಇದೀಗ ತಾಲಿಬಾನ್ ಆದೇಶ ಹೊರಡಿಸಿದ್ದು, ಮುಂದಿನ ದಿನಗಳಲ್ಲಿ ಇದು ಕಟ್ಟುನಿಟ್ಟಾಗಿ ಜಾರಿಗೆ ಬರಲಿದೆ.
ಸ್ಥಿರ ಸರ್ಕಾರವನ್ನು ಉರುಳಿಸಿ, ಬಲವಂತದಿಂದ ಅಧಿಕಾರವನ್ನು ಕಬಳಿಸಿಕೊಂಡಿರುವ ತಾಲಿಬಾನ್ ಅಧಿಕಾರಕ್ಕೆ ಬಂದಂದಿನಿಂದ ಒಂದಿಲ್ಲೊಂದು ವಿಲಕ್ಷಣ ರೀತಿಯ ಕಾನೂನುಗಳನ್ನು ಜಾರಿಗೆ ತರಲಾಗುತ್ತಿದೆ. ಈಗಾಗಲೇ ಮಹಿಳೆಯರ ಸ್ವಾತಂತ್ರ್ಯದ ಪ್ರಮಾಣವನ್ನು ಕಡಿಮೆಗೊಳಿಸಿರುವ ತಾಲಿಬಾನ್, ಇದೀಗ ಸೌಂದರ್ಯ ಸೆಲೂನ್‌ಗಳನ್ನು ಮುಚ್ಚಿಸಲು ಆದೇಶ ಹೊರಡಿಸಿದೆ. ಇದರಿಂದ ಸುಮಾರು ೬೦ ಸಾವಿರಕ್ಕೂ ಅಧಿಕ ಉದ್ಯೋಗ ನಷ್ಟ ಉಂಟಾಗಲಿದ್ದು, ಅದರಲ್ಲೂ ಮುಖ್ಯವಾಗಿ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಭಾರೀ ಪೆಟ್ಟು ನೀಡಲಿದೆ. ಯಾಕೆಂದರೆ ಅಫ್ಘಾನ್‌ನಲ್ಲಿ ಸೌಂದರ್ಯ ಸೆಲೂನ್‌ಗಳ ಮೂಲಕ ಮಹಿಳೆಯರು ಕುಟುಂಬಗಳನ್ನು ಸಾಕುವ ಹೊಣೆ ಹೊತ್ತಿದ್ದು, ಆದರೆ ತಾಲಿಬಾನ್‌ನ ಹೊಸ ಆದೇಶದಿಂದ ಇದಕ್ಕೂ ಕೊಡಲಿಯೇಟು ಬೀಳಲಿದೆ. ಎರಡು ವರ್ಷಗಳ ಹಿಂದೆ ತಾಲಿಬಾನ್ ಅಫ್ಘಾನ್‌ನಲ್ಲಿ ಅಧಿಕಾರವನ್ನು ಮರಳಿ ಪಡೆದ ಬಳಿಕ ಸೌಂದರ್ಯ ಸೆಲೂನ್‌ಗಳು ಕಾರ್ಯನಿರ್ವಹಿಸಲು ಅನುಮತಿ ನೀಡಿತ್ತು. ಆದರೆ ಇದೀಗ ತಾಲಿಬಾನ್ ತನ್ನ ನಿರ್ಧಾರವನ್ನು ತಾಲಿಬಾನ್ ಬದಲಿಸಿಕೊಂಡಿದೆ. ತರಗತಿಗಳು, ಜಿಮ್‌ಗಳು ಮತ್ತು ಉದ್ಯಾನವನಗಳಿಂದ ಈಗಾಗಲೇ ಮಹಿಳೆಯರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಇದೀಗ ಸೌಂದರ್ಯ ಸೆಲೂನ್‌ಗಳ ಮೇಲೆ ಕೂಡ ತಾಲಿಬಾನಿಗಳು ವಕ್ರದೃಷ್ಟಿ ಹರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!