ಉದಯವಾಹಿನಿ, ನೂಕ್(ಗ್ರೀನ್‌ಲ್ಯಾಂಡ್): ಗ್ರೀನ್‌ಲ್ಯಾಂಡ್ ಮೇಲಿನ ಅಮೆರಿಕದ ನಿಯಂತ್ರಣ ವಿರೋಧಿಸುವ ಯುರೋಪಿನ ಎಂಟು ರಾಷ್ಟ್ರಗಳ ಸರಕುಗಳ ಮೇಲೆ ಫೆಬ್ರವರಿಯಿಂದ ಶೇ.10ರಷ್ಟು ಆಮದು ತೆರಿಗೆ ಹೇರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದ ಮೂಲಕ ಶನಿವಾರ ಘೋಷಣೆ ಮಾಡಿದ್ದಾರೆ.ಡೆನ್ಮಾರ್ಕ್, ನಾರ್ವೆ, ಸ್ವೀಡನ್, ಫ್ರಾನ್ಸ್, ಜರ್ಮನಿ, ಯುನೈಟೆಡ್ ಕಿಂಗ್‌ಡಮ್ (ಯು.ಕೆ), ನೆದರ್‌ಲ್ಯಾಂಡ್ಸ್ ಮತ್ತು ಫಿನ್‌ಲ್ಯಾಂಡ್ ದೇಶಗಳು ಸುಂಕ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.
ಇದರೊಂದಿಗೆ, ಡೆನ್ಮಾರ್ಕ್ ಮತ್ತಿತರ ಯುರೋಪಿಯನ್ ದೇಶಗಳೊಂದಿಗೆ ಗ್ರೀನ್‌ಲ್ಯಾಂಡ್ ಕುರಿತು ಮಾತುಕತೆ ನಡೆಸಲು ಟ್ರಂಪ್ ಸುಂಕಗಳನ್ನು ಬಳಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಆದರೆ, ಇಂಥ ಸುಂಕ ಬೆದರಿಕೆ ಟ್ರಂಪ್ ಮತ್ತು ಅಮೆರಿಕದ ದೀರ್ಘಕಾಲದ NATO ಪಾಲುದಾರರ ನಡುವೆ ಬಿರುಕು ಉಂಟು ಮಾಡುವ ಸಾಧ್ಯತೆ ದಟ್ಟವಾಗಿದೆ.
ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಮುಖ್ಯಸ್ಥೆ ಆಂಟೋನಿಯೊ ಕೋಸ್ಟಾ ಅವರು ತಮ್ಮ ಜಂಟಿ ಹೇಳಿಕೆಯಲ್ಲಿ, ಈ ರೀತಿಯ ಸುಂಕಗಳು ಅಟ್ಲಾಂಟಿಕ್ ಸಾಗರದಾಚೆಗಿನ ಸಂಬಂಧಗಳನ್ನು ಹಾಳುಮಾಡುತ್ತವೆ. ಯುರೋಪ್ ತನ್ನ ಸಾರ್ವಭೌಮತ್ವವನ್ನು ಎತ್ತಿಹಿಡಿಯಲು ಬದ್ಧವಾಗಿದೆ ಎಂದು ಹೇಳಿದ್ದಾರೆ. ಆದರೆ, ಗ್ರೀನ್ ಲ್ಯಾಂಡ್ ಅಮೆರಿಕದ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕ ಎಂದು ಟ್ರಂಪ್ ಹೇಳುತ್ತಲೇ ಇದ್ದಾರೆ.
ಸುಮಾರು 57,000 ಜನಸಂಖ್ಯೆ ಹೊಂದಿರುವ ಮತ್ತು ಡೆನ್ಮಾರ್ಕ್‌ನಿಂದ ರಕ್ಷಣೆ ಪಡೆಯುತ್ತಿರುವ ಆಯಕಟ್ಟಿನ ಸ್ಥಳ ಮತ್ತು ಖನಿಜ ಸಮೃದ್ಧ ದ್ವೀಪವಾದ ಗ್ರೀನ್‌ಲ್ಯಾಂಡ್ ಅನ್ನು ವಶಕ್ಕೆ ಪಡೆಯುವುದು ಟ್ರಂಪ್ ಉದ್ದೇಶ. ಈ ತಿಂಗಳ ಆರಂಭದಲ್ಲಿ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಪದಚ್ಯುತಗೊಳಿಸಲು ಮಿಲಿಟರಿ ಕಾರ್ಯಾಚರಣೆ ನಡೆಸಿದ ಒಂದು ದಿನದ ನಂತರ ಅವರು ಈ ಕುರಿತ ವಿಚಾರಗಳನ್ನು ಪದೇ ಪದೇ ಉಲ್ಲೇಖಿಸುತ್ತಿದ್ದಾರೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಟ್ರಂಪ್ ಸುಂಕದ ಬೆದರಿಕೆಗೆ ಪ್ರತಿಕ್ರಿಯಿಸಿ, ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ, ಯಾವುದೇ ಬೆದರಿಕೆಗಳು ನಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
