ಉದಯವಾಹಿನಿ, ಢಾಕಾ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ವ್ಯಕ್ತಿಯ ಹತ್ಯೆಯಾಗಿದೆ. ಹಿಂದೂ ಉದ್ಯಮಿಯೊಬ್ಬರನ್ನು ಥಳಿಸಿ ಕೊಲೆ ಮಾಡಲಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಗಾಜಿಪುರದಲ್ಲಿ ಬಾಳೆಹಣ್ಣಿನ ವಿವಾದದ ನಂತರ ಕುಟುಂಬದ ಮೂವರು ಸದಸ್ಯರು ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ. ‘ಬೈಶಾಖಿ ಸ್ವೀಟ್‌ಮೀಟ್ ಮತ್ತು ಹೋಟೆಲ್’ ಮಾಲೀಕ ಲಿಟನ್ ಚಂದ್ರ ಘೋಷ್ (55) ಕೊಲೆಯಾದ ಉದ್ಯಮಿ. ಒಂದೇ ಕುಟುಂಬದ ಮೂವರು ಸದಸ್ಯರಾದ ಸ್ವಪನ್ ಮಿಯಾ (55), ಅವರ ಪತ್ನಿ ಮಜೀದಾ ಖಾತುನ್ (45) ಮತ್ತು ಅವರ ಮಗ ಮಾಸುಮ್ ಮಿಯಾ (28) ಹತ್ಯೆ ಮಾಡಿದ ಆರೋಪಿಗಳು ಎಂದು ಶಂಕಿಸಲಾಗಿದ್ದು, ಇವರನ್ನು ಬಂಧಿಸಲಾಗಿದೆ ಎಂದು ಕಾಳಿಗಂಜ್ ಪೊಲೀಸ್ ಠಾಣೆಯ ಅಧಿಕಾರಿ ಝಾಕಿರ್ ಮಾಹಿತಿ ನೀಡಿದ್ದಾರೆ.

ಮಾಸುಮ್ ಬಾಳೆ ತೋಟ ಹೊಂದಿದ್ದಾರೆ. ಇವರ ತೋಟದಿಂದ ಬಾಳೆಹಣ್ಣಿನ ಗೊಂಚಲು ಕಳ್ಳತನವಾಗಿದೆ. ಲಿಟನ್‌ ಅವರ ಹೋಟೆಲ್‌ನಲ್ಲಿ ಹುಡುಕುತ್ತಿದ್ದಾಗ ಕಳ್ಳತನವಾದ ಬಾಳೆಹಣ್ಣಿನ ಗೊಂಚಲು ಪತ್ತೆಯಾಗಿದ್ದು, ಈ ಸಂಬಂಧ ಎರಡೂ ಕಡೆಯ ನಡುವೆ ವಾಗ್ವಾದ ಉಂಟಾಗಿ ಜಗಳ ಆರಂಭವಾಗಿತ್ತು. ಈ ಸಂದರ್ಬದಲ್ಲಿ ಉದ್ಯಮಿಯನ್ನು ಆರೋಪಿಗಳು ಥಳಿಸಿದ್ದರು. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಉದ್ಯಮಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹೋಟೆಲ್‌ಗೆ ಮಾಸುಮ್ ಬಂದಿದ್ದ. ಆ ಸಮಯದಲ್ಲಿ ಹೋಟೆಲ್ ಉದ್ಯೋಗಿಯೊಂದಿಗೆ ಕ್ಷುಲ್ಲಕ ವಿಷಯಕ್ಕೆ ಜಗಳವಾಡಿದ್ದರು. ನಂತರ, ಮಾಸುಮ್ ಅವರ ತಂದೆ ಮತ್ತು ತಾಯಿ ಸ್ಥಳಕ್ಕೆ ಬಂದು ಜಗಳ ತೆಗೆದರು ಎಂದು ಲಿಟನ್ ಕುಟುಂಬಸ್ಥರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಗಾಜಿಪುರ ಜಿಲ್ಲೆಯ ಕಾಳಿಗಂಜ್ ಪ್ರದೇಶದಲ್ಲಿ ಶನಿವಾರ ನಡೆದ ಈ ಕೊಲೆ ಪ್ರಕರಣವು ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ಹಿಂದೂಗಳ ವಿರುದ್ಧ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿರುವುದೇ ಎಂಬುದು ದೃಢಪಟ್ಟಿಲ್ಲ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ: ಇತ್ತೀಚೆಗೆ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರಗಳು ಹೆಚ್ಚುತ್ತಿವೆ. ಎರಡು ವಾರಗಳ ಹಿಂದೆಯಷ್ಟೇ ಬಾಂಗ್ಲಾದೇಶದಲ್ಲಿ 24 ಗಂಟೆಯಲ್ಲಿ ಇಬ್ಬರು ಹಿಂದೂಗಳನ್ನು ದುಷ್ಕರ್ಮಿಗಳು ಹತ್ಯೆಗೈದಿದ್ದರು. ಈ ಪೈಕಿ ಜೆಸೋರ್‌ನ ಮೋನಿರಾಂಪುರ್ ಪ್ರದೇಶದಲ್ಲಿ ಐಸ್ ಕಾರ್ಖಾನೆಯ ಮಾಲೀಕ ರಾಣಾ ಪ್ರತಾಪ್​ ಬೈರಾಗಿ ಎಂಬವರ ತಲೆಗೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಹಾಗೆಯೇ ನರ್ಸಿಂಗ್ಡಿ ಎಂಬಲ್ಲಿ ಶರತ್ ಚಕ್ರವರ್ತಿ ಮಣಿ (40) ಎಂಬ ದಿನಸಿ ವ್ಯಾಪಾರಿಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!