ಉದಯವಾಹಿನಿ, ಪಾಕಿಸ್ತಾನ : ಕರಾಚಿಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಕನಿಷ್ಠ ಮೂವರು ಮೃತಪಟ್ಟಿದ್ದು, ಸುಮಾರು ಹನ್ನೆರಡು ಮಂದಿ ಗಾಯಗೊಂಡಿದ್ದಾರೆ. ಗುಲ್ ಪ್ಲಾಜಾ ಎಂಬ ಬಹುಮಹಡಿ ಶಾಪಿಂಗ್ ಕಾಂಪ್ಲೆಕ್ಸ್‌ನಲ್ಲಿ ಈ ಬೆಂಕಿ ಅವಘಡ ಸಂಭವಿಸಿದ್ದು, ಪೊಲೀಸ್ ಹಾಗೂ ರಕ್ಷಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ. ನಗರದ ಪ್ರಮುಖ ರಸ್ತೆಯಾದ ಎಂ.ಎ. ಜಿನ್ನಾ ರಸ್ತೆಯಲ್ಲಿ ಇರುವ ಗುಲ್ ಪ್ಲಾಜಾದಲ್ಲಿ ಶನಿವಾರ ರಾತ್ರಿ ಸುಮಾರು 10 ಗಂಟೆಯ ನಂತರ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ದೊರಕುತ್ತಿದ್ದಂತೆಯೇ ಅಗ್ನಿಶಾಮಕ ದಳ ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಕೈಗೊಂಡಿದ್ದಾರೆ.
ಗುಲ್ ಪ್ಲಾಜಾ ಒಂದು ಪ್ರಮುಖ ಹೊಲ್ವೇಲ್ ಮಾರುಕಟ್ಟೆಯಾಗಿದ್ದು, ಇಲ್ಲಿ ಬಟ್ಟೆ ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳು, ಆಟಿಕೆಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟ ನಡೆಯುತ್ತದೆ. ಅಂಗಡಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸುಲಭವಾಗಿ ಹೊತ್ತಿಕೊಳ್ಳುವ ವಸ್ತುಗಳು ಇದ್ದ ಕಾರಣ ಬೆಂಕಿ ಕ್ಷಿಪ್ರವಾಗಿ ಹರಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ಬೆಂಕಿ ಕಾಣಿಸಿಕೊಂಡ ಸಮಯದಲ್ಲಿ ಹೆಚ್ಚಿನ ಅಂಗಡಿ ಮಾಲೀಕರು ಅಂಗಡಿಗಳನ್ನು ಮುಚ್ಚುವ ಹಂತದಲ್ಲಿದ್ದರು ಅಥವಾ ಈಗಾಗಲೇ ಸ್ಥಳ ತೊರೆದಿದ್ದರು. ಆದರೆ ಕೆಲವರು ಇನ್ನೂ ಕಟ್ಟಡದೊಳಗೇ ಇದ್ದ ಕಾರಣ ಅಪಾಯ ಹೆಚ್ಚಾಗಿದೆ.
ಅಂಗಡಿ ಮಾಲೀಕ ಮೊಹಮ್ಮದ್ ಅಹ್ವಾನ್ ಘಟನೆ ಕುರಿತು ಮಾತನಾಡಿ, “ನಾನು ಅಂಗಡಿ ಮುಚ್ಚುತ್ತಿದ್ದಾಗ ಗೇಟ್ ನಂಬರ್ ಐದಿನ ಬಳಿ ಬೆಂಕಿ ಕಾಣಿಸಿಕೊಂಡಿತು. ಅಗ್ನಿಶಾಮಕ ಉಪಕರಣಗಳಿಂದ ನಂದಿಸಲು ಪ್ರಯತ್ನಿಸಿದ್ದೇವೆ. ಆದರೆ ಬೆಂಕಿ ನಿಯಂತ್ರಣ ತಪ್ಪಿ ಸಂಪೂರ್ಣವಾಗಿ ಹರಡಿತು” ಎಂದು ಹೇಳಿದ್ದಾರೆ.
ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಈ ನಡುವೆ ಅಗ್ನಿ ಅವಘಡದ ನಿಖರ ಕಾರಣ ಪತ್ತೆ ಹಚ್ಚಲು ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಪ್ರಾಥಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಶಂಕೆ ವ್ಯಕ್ತವಾಗಿದೆ. ವಾಣಿಜ್ಯ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳ ಕೊರತೆಯಿಂದಾಗಿ ಇಂತಹ ಅವಘಡಗಳು ಪಾಕಿಸ್ತಾನದಲ್ಲಿ ಮರುಮರು ಸಂಭವಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!