ಉದಯವಾಹಿನಿ,: ಸಂಬಂಧಗಳೆಲ್ಲ ದೂರ ಸರಿಯುತ್ತಿರುವ ಈ ಕಾಲದಲ್ಲಿ, ಉತ್ತರ ಪ್ರದೇಶದಲ್ಲಿ ನಡೆದ ಈ ಘಟನೆ ಮಾನವೀಯತೆಯನ್ನು ತೀವ್ರವಾಗಿ ಪ್ರಶ್ನಿಸುವಂತಿದೆ. ತಾಯಿಯ ಸಾವಿನ ಬಳಿಕ ಸಹಾಯಕ್ಕೆ ಯಾರೂ ಬರದಾಗ, 10 ವರ್ಷದ ಪುಟ್ಟ ಬಾಲಕನೇ ತಾಯಿಯ ಮೃತದೇಹದ ಜೊತೆ ಆಸ್ಪತ್ರೆಯ ಶವಾಗಾರಕ್ಕೆ ಬಂದಿರುವ ಘಟನೆ ಎಲ್ಲರ ಮನಕಲಕಿದೆ. ಉತ್ತರ ಪ್ರದೇಶದ ಜಿಲ್ಲಾಸ್ಪತ್ರೆಯಲ್ಲಿ ಎಚ್‌ಐವಿ ಹಾಗೂ ಕ್ಷಯರೋಗದಿಂದ ಬಳಲುತ್ತಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ತಾಯಿಯ ಸಾವಿನ ಬಳಿಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕರೆದೊಯ್ಯಲು ಸಂಬಂಧಿಕರು, ನೆರೆಹೊರೆಯವರು ಯಾರೂ ಮುಂದೆ ಬರಲಿಲ್ಲ. ಅಂತಹ ಸಂದರ್ಭದಲ್ಲೇ, ಆಕೆಯ 10 ವರ್ಷದ ಮಗನೇ ಆಸ್ಪತ್ರೆಯ ಸಿಬ್ಬಂದಿಯೊಂದಿಗೆ ಏಕಾಂಗಿಯಾಗಿ ಶವಾಗಾರಕ್ಕೆ ಬಂದಿದ್ದಾನೆ.
ಈ ಬಾಲಕನ ಜೀವನ ಈಗಾಗಲೇ ದುಃಖದಿಂದ ತುಂಬಿದೆ. ಕಳೆದ ವರ್ಷ ಅವನ ತಂದೆಯೂ ಎಚ್‌ಐವಿಯಿಂದಲೇ ಮೃತಪಟ್ಟಿದ್ದರು. ತಂದೆಗೆ ಈ ರೋಗ ಇರುವುದು ತಿಳಿದ ಬಳಿಕ, ಊರಿನ ಜನರೂ ಸಂಬಂಧಿಕರೂ ಈ ಕುಟುಂಬದಿಂದ ಸಂಪೂರ್ಣ ದೂರ ಉಳಿದಿದ್ದರು. ತಂದೆಯ ಸಾವಿನ ನಂತರ ತಾಯಿಗೂ ಅನಾರೋಗ್ಯ ತೀವ್ರವಾದಾಗ, ಈ ಪುಟ್ಟ ಬಾಲಕ ಶಾಲೆಯನ್ನು ಬಿಟ್ಟು ತಾಯಿಯ ಆರೈಕೆಯಲ್ಲಿ ತೊಡಗಿದ್ದ.“ನಾನೇ ಅಮ್ಮನನ್ನು ನೋಡಿಕೊಳ್ಳುತ್ತಿದ್ದೆ. ನಮ್ಮ ಚಿಕ್ಕಪ್ಪನಿಗೂ ಅಮ್ಮ ಸತ್ತ ವಿಷಯ ಗೊತ್ತಿಲ್ಲ” ಎಂದು ಬಾಲಕ ಕಣ್ಣೀರಿಡುತ್ತಾ ಹೇಳಿರುವ ಮಾತುಗಳು ಕಲ್ಲು ಹೃದಯವನ್ನೂ ಕರಗಿಸುವಂತಿವೆ. ತಾಯಿಯ ಮೃತದೇಹದ ಪಕ್ಕದಲ್ಲೇ ಆಸ್ಪತ್ರೆಯ ನೆಲದ ಮೇಲೆ ಗಂಟೆಗಟ್ಟಲೆ ಕುಳಿತಿದ್ದ ಬಾಲಕ, ಪೊಲೀಸರು ಬರುವವರೆಗೂ ಅಲ್ಲಿಂದ ಕದಲಿಲ್ಲ ಎಂದು ಆಸ್ಪತ್ರೆಯ ಸಿಬ್ಬಂದಿ ತಿಳಿಸಿದ್ದಾರೆ.
ಈ ಹೃದಯವಿದ್ರಾವಕ ದೃಶ್ಯಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಸ್ಥಳೀಯ ಪೊಲೀಸರು ಆಸ್ಪತ್ರೆಗೆ ಧಾವಿಸಿದರು. ಅವರು ಬಾಲಕನಿಗೆ ಆಸರೆಯಾಗಿ ನಿಂತು, ಮರಣೋತ್ತರ ಪರೀಕ್ಷೆ ಹಾಗೂ ಅಂತ್ಯಕ್ರಿಯೆಯ ವ್ಯವಸ್ಥೆಗಳನ್ನು ಮಾಡಿದರು. ಪೊಲೀಸರ ಈ ನಡೆ ಕೆಲಮಟ್ಟಿಗೆ ಮಾನವೀಯತೆಯ ಮೇಲೆ ನಂಬಿಕೆಯನ್ನು ಮರಳಿ ತಂದಿದೆ.
ತಾಯಿಯ ಸಾವಿನ ನೋವಿನ ನಡುವೆಯೇ, ಈ ಬಾಲಕ ಮತ್ತೊಂದು ಆತಂಕವನ್ನೂ ವ್ಯಕ್ತಪಡಿಸಿದ್ದಾನೆ. ತನ್ನ ಪ್ರಾಣಕ್ಕೆ ಅಪಾಯವಿದೆ ಮತ್ತು ತನ್ನ ಜಮೀನನ್ನು ಕಬಳಿಸಲು ಸಂಬಂಧಿಕರು ಸಂಚು ರೂಪಿಸುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ತಾಯಿಯ ಅನಾರೋಗ್ಯದ ಬಗ್ಗೆ ತಿಳಿದಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎಂಬುದು ಅವನ ಅಸಹಾಯತೆಯನ್ನು ಇನ್ನಷ್ಟು ಸ್ಪಷ್ಟಪಡಿಸುತ್ತದೆ.
