ಉದಯವಾಹಿನಿ, ನವೀ ಮುಂಬಯಿ: ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದಿದ್ದ ದೆಹಲಿ ಕ್ಯಾಪಿಟಲ್ಸ್ ವಿರುದ್ಧದ ಡಬ್ಲ್ಯೂಪಿಎಲ್ 2026 ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ನಾಯಕಿ ಸ್ಮೃತಿ ಮಂಧಾನ 61 ಎಸೆತಗಳಲ್ಲಿ 96 ರನ್ ಗಳಿಸಿದರು. ಈ ಇನಿಂಗ್ಸ್‌ ಮೂಲಕ ಅವರು ಮುಂಬೈ ತಂಡದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌‌ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು. ಡಬ್ಲ್ಯೂಪಿಎಲ್‌ನಲ್ಲಿ ವೈಯಕ್ತಿಕ ಗರಿಷ್ಠ ಮೊತ್ತ ಪೇರಿಸಿದ ಭಾರತೀಯ ಆಟಗಾರ್ತಿ ಎಂಬ ಹಿರಿಮೆಗೆ ಸ್ಮೃತಿ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಹರ್ಮನ್‌ಪ್ರೀತ್‌ ಕೌರ್‌ ಹೆಸರಿನಲ್ಲಿತ್ತು. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಜೈಂಟ್ಸ್ ನಡುವಿನ WPL 2024 ಪಂದ್ಯದ ವೇಳೆ, ಹರ್ಮನ್ 48 ಎಸೆತಗಳಲ್ಲಿ 95* ರನ್ ಗಳಿಸಿದ್ದರು.ಒಟ್ಟಾರೆಯಾಗಿ ಅತ್ಯಧಿಕ ವೈಯಕ್ತಿಕ ಮೊತ್ತ ಗಳಿಸಿದ ಜಂಟಿ ದಾಖಲೆ ಆರ್‌ಸಿಬಿಯ ಮಾಜಿ ಆಟಗಾರ್ತಿ ಸೋಫಿ ಡಿವೈನ್‌ ಮತ್ತು ಜಾರ್ಜಿಯಾ ವೋಲ್‌ ಹೆಸರಿನಲ್ಲಿದೆ ಉಭಯ ಆಟಗಾರ್ತಿಯರು 99 ರನ್‌ ಬಾರಿಸಿದ್ದಾರೆ.

ಸತತ 4ನೇ ಪಂದ್ಯ ಗೆದ್ದ ಆರ್‌ಸಿಬಿ : ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವು ಹಾಲಿ ಆವೃತ್ತಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿತು. ಡಿ.ವೈ. ಪಾಟೀಲ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ತಂಡವು ಎಂಟು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಸುಲಭವಾಗಿ ಮಣಿಸಿತು. ಜೊತೆಗೆ ಅಜೇಯ ಓಟದೊಂದಿಗೆ ಅಂಕಪ‍ಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರ ಮಾಡಿಕೊಂಡಿತು. 167 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆರ್‌ಸಿಬಿ ತಂಡವು 10 ಎಸೆತಗಳು ಬಾಕಿ ಇರುವಂತೆ 2 ವಿಕೆಟ್‌ಗೆ 169 ರನ್ ಗಳಿಸಿ ಸಂಭ್ರಮಿಸಿತು. ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಡೆಲ್ಲಿ ತಂಡ ಲಾರೆನ್ ಬೆಲ್ (26ಕ್ಕೆ3) ಮತ್ತು ಸಯಾಲಿ ಸಾತ್ಗರೆ (27ಕ್ಕೆ3) ಅವರ ದಾಳಿಗೆ ತತ್ತರಿಸಿದ ಡೆಲ್ಲಿ ತಂಡ ಕೇವಲ ಹತ್ತು ರನ್‌ಗಳಾಗುವಷ್ಟರಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಶಫಾಲಿ ವರ್ಮಾ (62) ಬಾರಿಸಿದ ಅರ್ಧಶತಕದ ನೆರವಿನಿಂದ ಡೆಲ್ಲಿ ತಂಡವು 166 ರನ್‌ಗಳ ಗೌರವಾರ್ಹ ಮೊತ್ತ ಗಳಿಸಿತು.

Leave a Reply

Your email address will not be published. Required fields are marked *

error: Content is protected !!