
ಉದಯವಾಹಿನಿ ಕೆಂಭಾವಿ : ಪಟ್ಟಣ ವ್ಯಾಪ್ತಿಯ ಹಲವೆಡೆ ರೈತರು ಈಗಾಗಲೆ ಹತ್ತಿ, ತೊಗರಿ ಬೆಳೆ ಬಿತ್ತನೆ ಮಾಡಿದ್ದು ನಿತ್ಯ ಓಡಾಟ ನಡೆಸುವ ಬಿಡಾಡಿ ದನಗಳ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಇಲ್ಲಿಯವರೆಗೆ ಮಳೆ ಇಲ್ಲದೆ ಯಾತನೆ ಅನುಭವಿಸಿದ್ದ ರೈತರಿಗೆ ಕಳೆದ ಒಂದು ವಾರದಿಂದ ಉತ್ತಮ ಮಳೆ ಬೀಳುತ್ತಿದೆ. ರೈತರು ಮುಂಗಾರು ಹಂಗಾಮಿನ ಬೆಳೆಗಳನ್ನು ಬಿತ್ತನೆ ಮಾಡಿದ್ದು ನಾಟಿ ಹಂತಕ್ಕೆ ಬಂದ ಬೆಳೆಗಳನ್ನು ಬಿಡಾಡಿ ದನಗಳು ತಿಂದು ಹಾಕುತ್ತಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ.
ಹೋರಿ, ಎಮ್ಮೆ, ಆಕಳು ಸೇರಿದಂತೆ ಸುಮಾರು ೨೦ ರಿಂದ ೫೦ ದನಗಳ ಹಿಂಡು ಒಮ್ಮೇಲೆ ಜಮೀನುಗಳಿಗೆ ನುಗ್ಗುತ್ತಿದ್ದು ನಾಟಿಕೆ ಕಂಡ ಬೆಳೆಗಳು ರಾಸುಗಳ ತುಳಿತದಿಂದ ಸಂಪೂರ್ಣ ನಾಶವಾಗುತ್ತಿದ್ದು ಈ ಕುರಿತು ಪುರಸಭೆಗೆ ಹಲವು ರೈತರು ಮೌಖಿಕವಾಗಿ ತಿಳಿಸಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂದು ಹಲವು ರೈತರು ಪತ್ರಿಕೆ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು. ಬಿಡಾಡಿ ದನಗಳ ಹಾವಳಿ ತಡೆಗಟ್ಟಲು ಪುರಸಭೆ ವತಿಯಿಂದ ಪಟ್ಟಣದಲ್ಲಿ ಡಂಗುರ ಅಥವಾ ಮೈಕ್ ಮೂಲಕ ಸೂಚನೆ ನೀಡಲು ರೈತರು ಆಗ್ರಹಿಸಿದ್ದಾರೆ. ಒಂದು ವೇಳೆ ದನಗಳ ಹಾವಳಿ ಹೀಗೆ ಮುಂದುವರೆದರೆ ಸ್ವತ ರೈತರೆ ದನಗಳನ್ನು ಕಟ್ಟಿಹಾಕಿ ಪುರಸಭೆಗೆ ತಂದು ಕಟ್ಟಿ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.
[ಕಳೆದ ಐದು ದಿನಗಳಿಂದ ಹಿಂಡುಗಟ್ಟಲೆ ಎಮ್ಮೆಗಳು ಬಿತ್ತಿದ ಹೊಲಗಳಿಗೆ ಲಗ್ಗೆ ಇಡುತ್ತಿದ್ದು ಇದರಿಂದ ನಮ್ಮ ಹತ್ತಿ ಬೆಳೆಗಳು ಸಂಪೂರ್ಣ ಕೆಟ್ಟುಹೋಗಿವೆ. ಈ ಬಗ್ಗೆ ದನಗಳನ್ನು ಸಾಕುತ್ತಿರುವ ರೈತರಿಗೆ ತಿಳಿಸಿದರೂ ಯಾವುದೆ ಪ್ರಯೋಜನವಾಗಿಲ್ಲ. ಕೂಡಲೆ ಪುರಸಭೆ ಕ್ರಮ ಕೈಗೊಂಡು ರೈತರ ಹಿತ ಕಾಪಾಡಬೇಕು]
ಚನ್ನಪ್ಪ ಪೂಜಾರಿ. ರೈತ
