ಉದಯವಾಹಿನಿ, ಪನೀರ್ ಅಂದ್ರೆ ಯಾರಿಗ್ ತಾನೇ ಇಷ್ಟ ಇಲ್ಲ ಹೇಳಿ. ಪನೀರ್ ಸವಿಯಲು ಪ್ರತಿಯೊಬ್ಬರೂ ಹಾತೊರೆಯುತ್ತಾರೆ. ಪನೀರ್‌ನಿಂದ ಮಾಡುವ ರುಚಿಕರ ಖಾದ್ಯಗಳು ಪ್ರತಿಯೊಬ್ಬರಿಗೂ ಇಷ್ಟವಾಗುತ್ತವೆ. ಮನೆಯಲ್ಲಿಯೇ ಸುಲಭವಾಗಿ ಮತ್ತು ರುಚಿಕರವಾಗಿ ಹೋಟೆಲ್ ಶೈಲಿಯ ಚಿಲ್ಲಿ ಪನೀರ್ ಡ್ರೈ ತಯಾರಿಸುವ ವಿಧಾನ ಇಲ್ಲಿದೆ. ಇದು ಪಾರ್ಟಿ ಅಥವಾ ಸಂಜೆಯ ಸ್ನ್ಯಾಕ್ಸ್‌ಗೆ ಅತ್ಯುತ್ತಮ ಆಯ್ಕೆಯಾಗಿದೆ. ಪನೀರ್: 250 ಗ್ರಾಂ (ಚೌಕಾಕಾರದ ತುಂಡುಗಳು)
ಕಾರ್ನ್ ಫ್ಲೋರ್ (ಮೆಕ್ಕೆಜೋಳದ ಹಿಟ್ಟು): 3 ಟೀ ಚಮಚ
ಮೈದಾ ಹಿಟ್ಟು: 2 ಟೀ ಚಮಚ
ಕ್ಯಾಪ್ಸಿಕಂ: 1 (ದೊಡ್ಡದಾಗಿ ಹೆಚ್ಚಿದ್ದು)
ಈರುಳ್ಳಿ: 1 (ದಳಗಳಂತೆ ಬಿಡಿಸಿದ್ದು)
ಶುಂಠಿ ಮತ್ತು ಬೆಳ್ಳುಳ್ಳಿ: ತಲಾ 1 ಟೀ ಚಮಚ (ಸಣ್ಣಗೆ ಹೆಚ್ಚಿದ್ದು)
ಹಸಿಮೆಣಸಿನಕಾಯಿ: 2-3 (ಸೀಳಿದ್ದು)
ಸಾಸ್‌ಗಳು: ಸೋಯಾ ಸಾಸ್ (1 ಚಮಚ), ರೆಡ್ ಚಿಲ್ಲಿ ಸಾಸ್ (1 ಚಮಚ), ಟೊಮೆಟೊ ಕೆಚಪ್ (1 ಚಮಚ), ವಿನೆಗರ್ (1/2 ಚಮಚ)ಇತರ ಪದಾರ್ಥಗಳು: ಕರಿಮೆಣಸಿನ ಪುಡಿ, ಉಪ್ಪು, ಎಣ್ಣೆ ಮತ್ತು ಸ್ಪ್ರಿಂಗ್ ಆನಿಯನ್ (ಈರುಳ್ಳಿ ಹೂವು)
ತಯಾರಿಸುವ ವಿಧಾನ:ಹಂತ 1: ಮೊದಲಿಗೆ ಪನೀರ್ ಫ್ರೈ ಮಾಡುವುದು. ಒಂದು ಬೌಲ್‌ನಲ್ಲಿ ಪನೀರ್ ತುಂಡುಗಳನ್ನ ತಗೆದುಕೊಂಡು ಅದಕ್ಕೆ ಕಾರ್ನ್ ಫ್ಲೋರ್, ಮೈದಾ, ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ. ಸ್ವಲ್ಪ ನೀರು ಚಿಮುಕಿಸಿ, ಮಸಾಲೆ ಪನೀರ್‌ಗೆ ಚೆನ್ನಾಗಿ ಅಂಟಿಕೊಳ್ಳುವಂತೆ ಬೆರೆಸಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಪನೀರ್ ತುಂಡುಗಳನ್ನ ಹಾಕಿ ಗೋಲ್ಡನ್ ಬ್ರೌನ್ ಮತ್ತು ಗರಿಗರಿಯಾಗುವವರೆಗೆ ಕರಿದು ಪಕ್ಕಕ್ಕಿಡಿ.
ಹಂತ 2: ಸಾಸ್ ಮಿಶ್ರಣ ಸಿದ್ಧತೆ. ಒಂದು ಸಣ್ಣ ಬಟ್ಟಲಿನಲ್ಲಿ ಸೋಯಾ ಸಾಸ್, ಚಿಲ್ಲಿ ಸಾಸ್, ಟೊಮೆಟೊ ಕೆಚಪ್ ಮತ್ತು ವಿನೆಗರ್ ಸೇರಿಸಿ ಮಿಶ್ರಣ ಮಾಡಿರಿ. (ಇದರಿಂದ ಅಡುಗೆ ಮಾಡುವಾಗ ಸಾಸ್ ಸೀಯುವುದಿಲ್ಲ).
ಹಂತ 3: ಚಿಲ್ಲಿ ಪನೀರ್ ಒಗ್ಗರಣೆ. ಮತ್ತೊಂದು ಬಾಣಲೆಯಲ್ಲಿ 2 ಚಮಚ ಎಣ್ಣೆ ಹಾಕಿ, ಹೆಚ್ಚಿದ ಬೆಳ್ಳುಳ್ಳಿ, ಶುಂಠಿ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಹೆಚ್ಚಿನ ಉರಿಯಲ್ಲಿ ಬಾಡಿಸಿರಿ. ನಂತರ ಈರುಳ್ಳಿ ಮತ್ತು ಕ್ಯಾಪ್ಸಿಕಂ ಸೇರಿಸಿ 2 ನಿಮಿಷ ಫ್ರೈ ಮಾಡಿ (ಇವು ಪೂರ್ಣ ಬೇಯಬಾರದು, ಗರಿಗರಿಯಾಗಿರಬೇಕು). ಈಗ ಸಿದ್ಧಪಡಿಸಿದ ಸಾಸ್ ಮಿಶ್ರಣ, ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿ ಸೇರಿಸಿ ಬೆರೆಸಿ. ಒಂದು ಚಮಚ ಕಾರ್ನ್ ಫ್ಲೋರ್ ಅನ್ನ 2 ಚಮಚ ನೀರಿನಲ್ಲಿ ಕಲಸಿ ಈ ಮಿಶ್ರಣಕ್ಕೆ ಸೇರಿಸಿ. ಇದು ಸಾಸ್ ದಪ್ಪವಾಗಲು ಸಹಾಯ ಮಾಡುತ್ತದೆ.
ಹಂತ 4: ಅಂತಿಮ ಹಂತದಲ್ಲಿ ಈಗ ಕರಿದ ಪನೀರ್ ತುಂಡುಗಳನ್ನ ಸೇರಿಸಿ, ಸಾಸ್ ಎಲ್ಲಾ ತುಂಡುಗಳಿಗೆ ಸಮವಾಗಿ ಹರಡುವಂತೆ ಹೆಚ್ಚಿನ ಉರಿಯಲ್ಲಿ ಲಘುವಾಗಿ ಕೈಯಾಡಿಸಿ. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಸ್ಪ್ರಿಂಗ್ ಆನಿಯನ್ ಉದುರಿಸಿ ಸ್ಟೌವ್ ಆಫ್ ಮಾಡಿ. ಈಗ ಬಿಸಿಯಾದ ಚಿಲ್ಲಿ ಪನೀರ್ ಡ್ರೈ ಈಗ ಸವಿಯಲು ಸಿದ್ಧವಾಗಿರುತ್ತದೆ. ಮನೆಯವರೆಲ್ಲರೂ ಸೇರಿ ಈ ಪನೀರ್ ಡ್ರೈ ಸವಿಯುವ ಮಜಾನೇ ಬೇರೆ…
