ಉದಯವಾಹಿನಿ , ಗದಗ: ಐತಿಹಾಸಿಕ ಸ್ಥಳ ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ 5ನೇ ದಿನದ ಉತ್ಖನನ ಕಾರ್ಯ ಮುಂದುವರೆದಿದೆ. ಭೂಮಿ ಅಗೆದಂತೆಲ್ಲಾ ಅನೇಕ ಶಿಲಾಕೃತಿಗಳು, ಕುರುಹುಗಳು ಪತ್ತೆಯಾಗುತ್ತಿವೆ. ಒಡೆದ ಮಡಿಕೆ ಆಕೃತಿಯ ಪ್ರಾಚ್ಯಾವಶೇಷಗಳು ಪತ್ತೆಯಾಗಿವೆ. ಇನ್ನು ಐತಿಹಾಸಿಕ ದೇವಸ್ಥಾನವನ್ನು ಮನೆಯನ್ನಾಗಿಸಿಕೊಂಡು ನಾಲ್ಕೈದು ಕುಟುಂಬಗಳು, ನಾಲ್ಕೈದು ತಲೆಮಾರುಗಳಿಂದ ವಾಸ ಮಾಡುತ್ತಿವೆ. ಈಗ ಆ ಕುಟುಂಬಕ್ಕೆ ಆತಂಕ ಎದುರಾಗಿದೆ.ಹೌದು, ಗದಗದ ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನ ಅಂಗಳದಲ್ಲಿ 5ನೇ ದಿನವೂ ಉತ್ಖನನ ಕಾರ್ಯ ಭರದಿಂದ ಸಾಗುತ್ತಿದೆ. 35 ಜನ ಕಾರ್ಮಿಕರಿಂದ ಉತ್ಖನನ ಕಾಮಗಾರಿ ನಡೆಯುತ್ತಿದೆ. ಉತ್ಖನನ ವೇಳೆ ಒಡೆದ ಮಡಿಕೆಯ ಅವಶೇಷ ಪತ್ತೆಯಾಗಿದೆ.
ಸಿಕ್ಕ ಒಡೆದ ಮಡಿಕೆ ಹಳೆಯ ಕಾಲದ್ದು ಎನ್ನಲಾಗಿದೆ. ಈ ಪ್ರಾಚ್ಯಾವಶೇಷವನ್ನು ತುಂಬಾ ನಾಜೂಕಿನಿಂದ ಸ್ವಚ್ಛಗೊಳಿಸಿ, ಅದನ್ನು ಹೊರ ತೆಗೆಯುವ ಕೆಲಸ ಸಿಬ್ಬಂದಿಗಳು ಮಾಡಿದರು. ಈ ಮಡಿಕೆ ಅವಶೇಷ ಯಾವ ಕಾಲದ್ದು, ಇದು ದವಸ ಧಾನ್ಯಗಳನ್ನು ಸಂಗ್ರಹಿಸುವ ಮಡಿಕೆನಾ? ಚಿನ್ನ, ಆಭರಣಗಳನ್ನು ಇರಿಸಿದ್ದ ಮಡಿಕೆಯಾ ಎಂಬ ಬಗ್ಗೆ ಕುತೂಕಲ ಮೂಡಿಸಿದೆ. ಈ ಮಡಿಕೆ ಒಳ ಭಾಗದ ಮಣ್ಣನ್ನು ಸಹ ಕಾರ್ಮಿಕರು ಪರಿಶೀಲನೆ ಮಾಡ್ತಿದ್ದಾರೆ.
