ಉದಯವಾಹಿನಿ, ಬೆಂಗಳೂರು: ಡಿ.ಕೆ.ಶಿವಕುಮಾರ್ ಮೊದಲಿಂದಲೂ ಪಕ್ಷದ ಶಿಸ್ತಿನ ಸಿಪಾಯಿ.ಪಕ್ಷದ ಹಿತದೃಷ್ಟಿಯಿಂದ ಶಾಸಕರ ಹಿತದೃಷ್ಟಿಯಿಂದ ಎಲ್ಲವನ್ನೂ ತಾಳ್ಮೆಯಿಂದ ನಡೆಸುತ್ತಿದ್ದಾರೆ. ಪಕ್ಷದ ಆದೇಶಕ್ಕೋಸ್ಕರ ಕಾಯುತ್ತಿದ್ದಾರೆ ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿಕಾರ ಯಾರಿಗೂ ಅಷ್ಟು ಸುಲಭವಾಗಿ ಬರುವುದಿಲ್ಲ. ಸಿಎಂ ಸ್ಥಾನ ಅಷ್ಟು ಸುಲಭವಾಗಿ ಸಿಗುವ ಹುದ್ದೆ ಅಲ್ಲ. ನಮ್ಮ ಗುರಿ ಇರುವುದು 2028ರ ಚುನಾವಣೆ. ಪಕ್ಷದ ತೀರ್ಮಾನಕ್ಕೋಸ್ಕರ ಶಾಸಕರ ಹಿತದೃಷ್ಟಿಯಿಂದ ನೊಂದ ಕಾರ್ಯಕರ್ತರ ಹಿತದೃಷ್ಟಿಯಿಂದ ಸಹನೆಯಿಂದ ಕಾಯುತ್ತಿದ್ದಾರೆ. ನಾನು ಮೊದಲೇ ಹೇಳಿದ್ದೆ ಡಿ.ಕೆ.ಶಿವಕುಮಾರ್ ಅವರ ಹಣೆ ಬರಹದಲ್ಲಿ ಸಿಎಂ ಆಗಬೇಕು ಎಂದು ಬರೆದಿದ್ದರೆ ಆಗುತ್ತಾರೆ ಅಂತ. ಈಗಲೂ ಅದನ್ನೇ ಹೇಳುತ್ತೇನೆ. ಡಿ.ಕೆ.ಶಿವಕುಮಾರ್ ಪಕ್ಷ ನಿಷ್ಠ ವ್ಯಕ್ತಿ. ಕೆಲವರು ವ್ಯಕ್ತಿ ನಿಷ್ಠರು ಇರುತ್ತಾರೆ, ಇನ್ನೂ ಕೆಲವರು ಅಧಿಕಾರಕ್ಕಾಗಿ ಇರುತ್ತಾರೆ. ಈಗ ಅನಿವಾರ್ಯವಾಗಿ ಸೆಷನ್ ಬಂದಿದೆ. ಇವತ್ತು ಬಿಜೆಪಿ ಕೇಂದ್ರ ಸರ್ಕಾರ ರಾಷ್ಟ್ರದಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಹಕ್ಕು ಕಿತ್ತುಕೊಂಡಿದೆ ಎಂದರು.
ಕಾಂಗ್ರೆಸ್‌ಗೆ ಎಲ್ಲಾ ವರ್ಗದ ಮತಗಳು ಸಹ ಬೇಕು. ಒಕ್ಕಲಿಗರು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಸೇರಿದಂತೆ ಎಲ್ಲರ ಮತಗಳು ಕಾಂಗ್ರೆಸ್‌ಗೆ ಬೇಕಾಗಿದೆ. ಡಿ.ಕೆ.ಶಿವಕುಮಾರ್ ಪಕ್ಷಕ್ಕೆ ನಿಷ್ಠರಾಗಿದ್ದಾರೆ. ಡಿಕೆಶಿವಕುಮಾರ್ ಅವರು ಎಲ್ಲ ನೋವುಗಳಲ್ಲೂ ಪಕ್ಷದ ಜೊತೆ ಇದ್ದಾರೆ. ಪಂಚಾಯತ್ ಚೇರಮನ್‌ಗಳೇ ಅಧಿಕಾರ ಬಿಡಲ್ಲ, ಅಣ್ಣ ಇನ್ವಿಟೇಷನ್‌ಗೆ ಹೆಸರು ಹಾಕಿಸಿದ್ದೀನಿ ಅಂತಾರೆ, ಮಾರ್ಚ್ ಕಳೆಯಲಿ ಅಂತಾರೆ ಕುರ್ಚಿಯನ್ನು ಅಷ್ಟು ಸುಲಭವಾಗಿ ಬಿಡಲ್ಲ. ರಾಜಕಾರಣದಲ್ಲಿ ನಂಬಿಕೆಗಳು ತುಂಬಾ ಮುಖ್ಯವಾಗುತ್ತದೆ. ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷರು. ಅವರು ಎಲ್ಲ ರೀತಿಯಲ್ಲೂ ಯೋಚನೆ ಮಾಡುತ್ತಾರೆ. ಎಲ್ಲರನ್ನೂ ಒಪ್ಪಿಸಿ ರಾಹುಲ್ ಗಾಂಧಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಧಿಕಾರನೂ ಶಾಶ್ವತ ಅಲ್ಲ, ತಾಳ್ಮೆನೂ ಶಾಶ್ವತ ಅಲ್ಲ ಎಂದು ನುಡಿದರು.
