ಉದಯವಾಹಿನಿ, ಬೀದರ್: ದಾರಿ ಬಿಡದಿದ್ದಕ್ಕೆ ಬಸ್ ಚಾಲಕನಿಗೆ ಹಲ್ಲೆ ಮಾಡಿ, ಬೈಕ್ ಸವಾರ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬೀದರ್ ತಾಲೂಕಿನ ಕಮಠಾಣ ಗ್ರಾಮದಲ್ಲಿ ನಡೆದಿದೆ. ಬಸ್ ಚಾಲಕ ಅಶೋಕ್ ಮಾಣೀಕಪ್ಪ ಎಂಬುವವರ ಮೇಲೆ ಹಲ್ಲೆ ನಡೆದಿದೆ. ಈ ಸಂಬಂಧ ಬಸ್ ಚಾಲಕ ದೂರು ಅಶೋಕ್ ಅವರು ದಾಖಲಿಸಿದ್ದು, ಬೈಕ್ ಸವಾರನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ದೂರಿನಲ್ಲಿ ಏನಿದೆ?: ಮನ್ನಾಏಕೇಳಿಯಿಂದ ಬೀದರ್ ಕಡೆ ಬರುವಾಗ ಬದಗಲ್ ಬಳಿ ಮೆರವಣಿಗೆ ನಡೆಯುತ್ತಿತ್ತು. ಈ ವೇಳೆ ಬಸ್ ನಿಲ್ಲಿಸಿದ್ದಕ್ಕೆ ಹಿಂಬದಿಯಿಂದ ಬಂದು ಬೈಕ್ ಸವಾರನೊಬ್ಬ ದಾರಿ ಬಿಡುವಂತೆ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಬಳಿಕ ಕಮಠಾಣಕ್ಕೆ ಬರುವಷ್ಟರಲ್ಲೇ ಬೈಕ್ ಸವಾರನ ಕಡೆಯವರು ಬಸ್ ತಡೆದು ನಮ್ಮವನಿಗೆ ಯಾಕೆ ದಾರಿಬಿಟ್ಟಿಲ್ಲ ಎಂದು ಅವಾಜ್ ಹಾಕಿದ್ದಾರೆ.
ಇದೇ ವೇಳೆ ಬೈಕ್ ಸವಾರ ಚಾಲಕನ ಕೊರಳಪಟ್ಟಿ ಹಿಡಿದು, ಎದೆಗೆ ಗುದ್ದಿ ಹಲ್ಲೆ ಮಾಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಹಲ್ಲೆಯ ದೃಶ್ಯಗಳನ್ನು ಚಾಲಕ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ಸಂಬಂಧ ಬೀದರ್ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
