
ಉದಯವಾಹಿನಿ ದೇವರಹಿಪ್ಪರಗಿ: ಕಿಸಾನ್ ಸನ್ಮಾನ ಯೋಜನೆ ಹಾಗೂ ತೊಗರಿ ಬೆಳೆಗೆ ನೆಟ್ಟಿ ರೋಗದಿಂದ ಬೆಳೆ ಹಾನಿಯಾಗಿದ್ದು ತಾಲೂಕಿನ ಕೆಲ ರೈತರಿಗೆ ಪರಿಹಾರ ಬಂದಿಲ್ಲ ಎಂದು ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಕವಿತಾ ಆರ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಪಟ್ಟಣದಲ್ಲಿ ಸೋಮವಾರದಂದು ಸಂಘದ ಗೌರವಾಧ್ಯಕ್ಷ ಶಿವಾನಂದ ಹಿರೇಮಠ ಮಾತನಾಡಿ 2022ನೇ ಸಾಲಿನಲ್ಲಿ ತೊಗರಿಗೆ ನೆಟ್ಟಿರೋಗ ಬಂದು ರೈತರ ಬೆಳೆ ಹಾನಿಯಾದ ಘಟನೆ ನಡೆದಿತ್ತು. ಸರ್ಕಾರ ಪರಿಹಾರ ಘೋಷಣೆ ಮಾಡಿದರು ಇನ್ನೂ ಹಣ ರೈತರ ಖಾತೆಗೆ ಜಮಾ ಆಗಿರುವುದಿಲ್ಲ. ಇನ್ನು ಕೆಲ ರೈತರಿಗೆ ಜಮಾ ಆಗಿದ್ದು ಈ ಬಾರಿ ಮುಂಗಾರು ವಿಳಂಬದಿಂದ ರೈತರು ಸಂಕಷ್ಟದಲ್ಲಿದ್ದಾರೆ ಕೂಡಲೇ ಪರಿಹಾರ ಒದಗಿಸಬೇಕು ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜಂಟಿ ಕಿಸಾನ್ ಸಮ್ಮಾನ್ ಯೋಜನೆಯಿಂದ ರೈತರ ಖಾತೆಗೆ ಹಣ ಜಮಾ ಮಾಡಲಾಗುತ್ತಿತ್ತು. ಇವಾಗ ರಾಜ್ಯ ಸರ್ಕಾರ ಈ ಯೋಜನೆ ಬಂದ್ ಮಾಡುವ ಮೂಲಕ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಕೂಡಲೇ ರಾಜ್ಯ ಸರ್ಕಾರ ಯೋಜನೆಯನ್ನು ಪ್ರಾರಂಭ ಮಾಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಕವಿತಾ ಆರ್ ಮಾತನಾಡಿ ಅವರು ಸರ್ಕಾರಕ್ಕೆ ಈ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷರಾದ ಈರಣ್ಣ ಕುಳೆಕುಮಟಗಿ, ರೈತ ಸಂಘದ ಪದಾಧಿಕಾರಿಗಳಾದ ಸಂಗಮೇಶ ಹುಣಸಗಿ, ಗುರಣ್ಣ ಹಂಗರಗಿ, ಲಕ್ಕಪ್ಪ ಹೂಗಾರ, ಮಲ್ಲಪ್ಪ ಸುಂಬಡ, ಅಜೀಜ್ ಯಲಗಾರ,ಹಣಮಂತರಾಯಗೌಡ ಪಾಟೀಲ, ಸಿದ್ದನಗೌಡ ಬಿರಾದಾರ, ಶಿವಪುತ್ರಪ್ಪಗೌಡ ಪಾಟೀಲ, ಅಪ್ಪಾಸಾಹೇಬ ಹರನಾಳ, ಭೀಮನಗೌಡ ಬಿರಾದಾರ, ಸುಭಾಷ್ ಸಜ್ಜನ್ ಸೇರಿದಂತೆ ಸುತ್ತಮುತ್ತಲಿನ ಗ್ರಾಮದ ರೈತರು ಉಪಸ್ಥಿತರಿದ್ದರು.
